ಮಹದಾಯಿ ತೀರ್ಪು- ಕೂಡಲೇ ಮೇಲ್ಮನವಿ ಸಲ್ಲಿ¸ಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

 

ಬೆಂಗಳೂರು, ಆ.15-ಮಹದಾಯಿ ತೀರ್ಪು ನಮಗೆ ಭಾಗಶಃ ಸಮಾಧಾನ ತಂದಿದ್ದರೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ತೀರ್ಪನ್ನು ಪ್ರಶ್ನಿಸಿ ರಾಜ್ಯಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸ್ವಾತಂತ್ರ್ಯ ದಿನಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನ್ಯಾಯಾಧೀಕರಣ ವಿದ್ಯುತ್ ಉತ್ಪಾದನೆಗೆ ನೀರು ಕೊಟ್ಟಿದೆ.. ಆದರೆ ಅದೂ ಕೂಡ ಹರಿದು ಗೋವಾಕ್ಕೆ ಹೋಗುತ್ತದೆ. ಹಾಗಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ. ನಮ್ಮ ವಕೀಲರ ತಂಡ ನ್ಯಾಯಾಧೀಕರಣದ ಮುಂದೆ ಸಮರ್ಥ ವಾದ ಮಂಡಿಸಿತ್ತು. ನ್ಯಾಯಾಧೀಕರಣದ ತೀರ್ಪಿನಿಂದ ಮುಂದಾಗುವ ಅನ್ಯಾಯವನ್ನು ತಪ್ಪಿಸಲು ಕೂಡಲೇ ರಾಜ್ಯಸರ್ಕಾರ ಮೇಲ್ಮನವಿ ಸಲ್ಲಿಸಲಿ ಎಂದು ಅವರು ಸಲಹೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ:
ಸದ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಮುಂದೆ ಕೆಲ ಕ್ಷೇತ್ರಗಳಿಗೆ ಸ್ಥಳೀಯ ಚುನಾವಣೆಗಳು ನಡೆಯುತ್ತಿದೆ. ಆನಂತರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದು ಬಾಕಿ ಇದೆ. ಮೊದಲು ಈ ಚುನಾವಣೆಗಳು ಮುಗಿಯಲಿ. ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಬಹುದು. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಜಾತಿ ಸಮೀಕ್ಷೆ ವರದಿ ಬಿಡುಗಡೆ ಹಾಗೂ ಇತರ ವಿಚಾರಗಳಿಗೆ ಸ್ಥಳೀಯ ಚುನಾವಣೆ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಅವರು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 71 ವರ್ಷ ಪೂರ್ಣಗೊಂಡಿದೆ. ನಾವು ಬಹಳಷ್ಟು ದೂರ ಸಾಗಿ ಬಂದಿದ್ದೇವೆ. ಸಾಕಷ್ಟು ಅಭಿವೃದ್ಧಿಯಾಗಿದೆ, ಇನ್ನೂ ಅಭಿವೃದ್ಧಿಯಾಗಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಮಂದಿ ಬಲಿದಾನವಾಗಿದ್ದಾರೆ. ಗಾಂಧೀಜಿ, ನೆಹರೂ, ಸರ್ದಾರ್ ವಲ್ಲಭಬಾಯಿಪಟೇಲ್ ಸೇರಿದಂತೆ ಮಹನೀಯರು ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದರು. ಅವರಿಗೆ ದೇಶ ಧನ್ಯವಾದ ಹೇಳಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ