ಬೆಂಗಳೂರು, ಆ.15-ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿರುವುದರಿಂದ ಹಾಗೂ ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಜೆ.ಪಿ.ಭವನದಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ತಾಯಿ ರಾಜರಾಜೇಶ್ವರಿ ಕೃಪೆ ತೋರಿದ್ದಾಳೆ. ಉತ್ತಮ ಮಳೆಯಾಗಿ ನದಿಗಳು ತುಂಬಿ ಹರಿಯುತ್ತಿವೆ. ಇದನ್ನೆಲ್ಲ ನೋಡಿದರೆ ದೇವರ ಆಶೀರ್ವಾದ ರಾಜ್ಯದ ಮೇಲಿರುವುದು ಗೊತ್ತಾಗುತ್ತದೆ ಎಂದು ಹೇಳಿದರು.
ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಅವರು, ಪಕ್ಷದ ರಾಜ್ಯಾಧ್ಯಕ್ಷರು ಧ್ವಜಾರೋಹಣ ನೆರವೇರಿಸಬೇಕಿತ್ತು. ಆದರೆ ಅವರು ಹುಣಸೂರಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಹೋಗಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾಗಿಯಾಗಿರುವುದರಿಂದ ಕಚೇರಿಗೆ ಬರಲು ಸಾಧ್ಯವಾಗದ ಕಾರಣ ನಾನೇ ಧ್ವಜಾರೋಹಣ ನೆರವೇರಿಸಿದ್ದೇನೆ ಎಂದು ಸಿಂಧ್ಯಾ ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಹೋರಾಟಗಾರರ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಂಡು ದೇಶ ರಕ್ಷಣೆಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.