ಬೆಂಗಳೂರು, ಆ.14-ಕೇರಳದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಸಾವು-ನೋವು ನಷ್ಟ ಸಂಭವಿಸಿ ಜನಜೀವನ ಅಸ್ತವ್ಯಸ್ತವಾಗಿದ್ದ ಬೆನ್ನಲ್ಲೇ ಇತ್ತ ರಾಜ್ಯದ ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮಲೆನಾಡು ಭಾಗಗಳಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದೆ.
ಜೀವನದಿಗಳು ತುಂಬಿ ಹರಿದು ಅಪಾಯದ ಮಟ್ಟ ತಲುಪಿವೆ. ಕಳೆದ ಹಲವು ದಿನಗಳಿಂದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಮಡಿಕೇರಿ, ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಲವು ಸೇತುವೆಗಳು ಮುಳುಗಡೆಯಾಗಿವೆ.
ಕುಕ್ಕೆಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಮಳೆ ನೀರಿಯಿಂದ ಜಲಾವೃತಗೊಂಡಿದೆ. ಮಳೆಯಿಂದಾಗಿ ಗುಂಡ್ಯ-ಕುಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಪೂಜೆಗೆ ತೆರಳಬೇಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪುತ್ತೂರು ಮಾರ್ಗವಾಗಿ ಬೆಳ್ಳಾರೆ ಮೂಲಕ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು.
ಮಡಿಕೇರಿಯಲ್ಲಿ ಧಾರಾಕಾರ ಮಳೆಗೆ ಲಕ್ಷ್ಮಣತೀರ್ಥ ಸೇರಿದಂತೆ ಸಣ್ಣ ಪುಟ್ಟ ನದಿಗಳು ಹರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಭಾಗಮಂಡಲ ಜಲಾವೃತವಾಗಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ಜಿಲ್ಲೆಯಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಪ್ರವಾಸಿಗರು ಮರಗಳ ಕೆಳಗೆ ಮತ್ತು ಎತ್ತರವಾದ ಗುಡ್ಡ ಪ್ರದೇಶಗಳಲ್ಲಿ ನಿಲ್ಲಬಾರದು, ವಾಹನಗಳನ್ನು ನಿಲ್ಲಿಸಬಾರದು. ನದಿ, ತೊರೆಗಳು ತುಂಬಿ ಸೇತುವೆ ಅಥವಾ ರಸ್ತೆಗಳಲ್ಲಿ ಅಪಾಯಮಟ್ಟದಲ್ಲಿ ಹರಿಯುತ್ತಿರುವಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ದಾಟಲು ಪ್ರಯತ್ನಿಸಬಾರದು.
ಪ್ರವಾಸಿಗರು ನದಿ, ತೊರೆ, ಜಲಪಾತ ಮುಂತಾದವುಗಳ ಸಮೀಪ ತೆರಳದಂತೆ ಸುರಕ್ಷಿತ ಸ್ಥಳದಿಂದ ವೀಕ್ಷಿಸಲು ಸೂಚಿಸಲಾಗಿದೆ.
ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಚಿಕ್ಕಮಗಳೂರು, ಹೊರನಾಡು, ಕಳಸಾ ಮಧ್ಯದ ಸೇತುವೆ ಮುಳುಗಡೆಯಾಗಿ ಜನರ ಓಡಾಟಕ್ಕೆ ಕಷ್ಟವಾಗಿದೆ. ಇಲ್ಲಿನ ಹೆಬ್ಬಾಳ ಸೇತುವೆ ಮುಳುಗಡೆಯಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಅಲ್ಲದೆ ಮಹಲ್ಗೋಡು ಸೇತುವೆಯೂ ಕೂಡ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳಸಾ, ಬಾಳಹೆನ್ನೂರು, ಚಾರ್ಮುಡಿ, ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ ಭಾರೀ ಮಳೆ ಪರಿಣಾಮ ಹಲವೆಡೆ ಗುಡ್ಡ ಕುಸಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್, ಫೆÇೀನ್ಗಳ ಸಂಪರ್ಕ ಕಡಿತಗೊಂಡಿದೆ. ಹೇಮಾವತಿ, ಭದ್ರಾ, ತುಂಗಾ ನದಿಗಳು ತುಂಬಿ ಹರಿಯುತ್ತಿವೆ.
ಚಲಿಸುತ್ತಿದ್ದ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು, ಮಹಮ್ಮದ್ ಮತ್ತು ನಾಗರಾಜ್ ಎಂಬುವರು ಗಾಯಗೊಂಡಿರುವ ಘಟನೆ ಗುಡ್ಡೇಹಳ್ಳಿ ಗ್ರಾಮದ ಸಮೀಪ ನಡೆದಿದೆ. ಮಳೆ ಬರುತ್ತಿದ್ದ ವೇಳೆ ಕೊಪ್ಪದಿಂದ ಎನ್.ಆರ್.ಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಗಾಯಾಳುಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೇಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಶಿರಸಿ, ಸಿದ್ಧಾಪುರ, ಯಲ್ಲಾಪುರ ತಾಲೂಕಿನಲ್ಲಿ ವರುಣನ ಅಟ್ಟಹಾಸ ಮುಂದುವರೆದಿದೆ. ಧಾರಾಕಾರ ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ. ಹೊಲಗದ್ದೆಗಳಿಗೆ ನೀರು ನುಗ್ಗಿ ಭತ್ತದ ಪೈರು ನಾಶವಾಗಿದೆ. ಯಲ್ಲಾಪುರದಲ್ಲಿ ಬೆಳಗಿನ ಜಾವ ಸುರಿದ ಮಳೆಯ ಆರ್ಭಟಕ್ಕೆ ಅರೆಬೈಲು ಬೆಟ್ಟದಲ್ಲಿ ಗುಡ್ಡ ಕುಸಿದಿದ್ದು ಹೆದ್ದಾರಿ ಬಂದ್ ಆಗಿದೆ. ಹಲವಾರು ಕಡೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಮಂಗಳೂರು, ಉಡುಪಿ ಮುಂತಾದ ಕಡೆ ಭಾರೀ ಮಳೆಯಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಉಡುಪಿ ನಗರ ಸೇರಿದಂತೆ ಕುಂದಾಪುರ, ಬೈಂದೂರು, ಕಾರ್ಕಳ ಭಾಗದಲ್ಲಿ ಮಳೆ ಮುಂದುವರೆದಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೀನುಗಾರರು ಕಡಲಿಗಿಳಿಯದಂತೆ ಸೂಚನೆ ನೀಡಲಾಗಿದೆ.