ಆಗಸ್ಟ್ 30ರೊಳಗೆ ಬೆಂಗಳೂರಿನ ವೈಭವ ಮರುಕಳಿಸಬೇಕು: ಹೈಕೋರ್ಟ್ ಕಟ್ಟಪ್ಪಣೆ

 

ಬೆಂಗಳೂರು, ಆ.14-ಫ್ಲೆಕ್ಸ್, ಬ್ಯಾನರ್‍ಗಳ ತೆರವಿನ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿರುವ ಹೈಕೋರ್ಟ್ ಕಾನೂನು ಉಲ್ಲಂಘಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿಯಿಂದ ಏಕೆ ನುಣುಚಿಕೊಳ್ಳುತ್ತಿದ್ದೀರಿ. ಆಗಸ್ಟ್ ತಿಂಗಳಿನೊಳಗೆ ಬೆಂಗಳೂರಿನ ವೈಭವ ಮರುಕಳಿಸಬೇಕು ಎಂದು ಕಟ್ಟಪ್ಪಣೆ ಮಾಡಿದೆ.

ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ಸಂಬಂಧದ ಪಿಐಎಲ್ ವಿಚಾರಣೆಯನ್ನು ಇಂದು ಮುಂದುವರೆಸಿದ ನ್ಯಾಯಾಲಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜಾಹೀರಾತು ತೆರವಿಗೆ ಸೆ.5ರವರೆಗೆ ಕಾಲಾವಕಾಶ ಕೋರಿದ ಕ್ರಮಕ್ಕೆ ಗರಂ ಆಯಿತಲ್ಲದೆ, ಇದು ಕಾನೂನಿನ ಮೇಲೆ ನಡೆಸುತ್ತಿರುವ ಹಿಂಸಾಚಾರವೆಂದು ಪರಿಗಣಿಸಬೇಕಾಗುತ್ತದೆ. ಕಾನೂನು ಉಲ್ಲಂಘಿಸುವವರ ಮೇಲೆ ಕರುಣೆ ಏಕೆ ತೋರಿಸಬೇಕು. ನಿಮ್ಮ ನೆಪ ಕೇಳುತ್ತಾ ಸುಮ್ಮನಿರಲು ಸಾಧ್ಯವಿಲ್ಲ, ಕೆಲಸವಾಗಬೇಕು ಅಷ್ಟೇ ಎಂದು ತಾಕೀತು ಮಾಡಿದೆ.

ಬೆಂಗಳೂರು ವೈಭವ ಮರುಕಳಿಸಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ಪೀಠ, ಅಧಿಕಾರಿಗಳ ವಿರುದ್ಧ ಗರಂ ಆಗಿ ಜಾಹೀರಾತು ನೀತಿ ರಚಿಸಲು ತಡ ಮಾಡುತ್ತಿರುವ ಸರ್ಕಾರದ ಕ್ರಮದ ವಿರುದ್ಧ ಹರಿಹಾಯ್ದರು.
ಅಧಿಕಾರಿಗಳು ಮೀಟಿಂಗ್ ಕರೆಯಲು ಕೋರ್ಟ್ ಆದೇಶಿಸಬೇಕೇ? ಏನು ಮಾಡುತ್ತಿದ್ದಾರೆ ನಿಮ್ಮ ಅಧಿಕಾರಿಗಳು? ಸಂಬಳ ಪಡೆಯುತ್ತಿಲ್ಲವೇ?ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲೇಬೇಕು. ಅಧಿಕಾರಿಗಳ ಈ ವರ್ತನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪಾಲಿಕೆ ಪರ ವಕೀಲ ಶ್ರೀನಿಧಿ ಅವರಿಗೆ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು.

ಜಾಹೀರಾತು ತಜ್ಞರು ಸೇರಿದಂತೆ ಜಾಹೀರಾತುದಾರರ ಜೊತೆ ಚರ್ಚೆ, ಸರ್ಕಾರ ವಿವಿಧ ಇಲಾಖೆಗಳ ಜೊತೆ ಚರ್ಚೆ ನಡೆಸುತ್ತೇವೆ ಎಂದು ಉಲ್ಲೇಖಿಸಿ ಪ್ರಮಾಣ ಪತ್ರ ಸಲ್ಲಿಸಿದ ಬಿಬಿಎಂಪಿ ವಿರುದ್ಧವೂ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.
ಫ್ಲೆಕ್ಸ್, ಬ್ಯಾನರ್ ಸಂಬಂಧ ಯಾವ ವೆಬ್‍ಸೈಟ್ ಪ್ರಕಟಿಸಿದ್ದೀರಿ, ವೆಬ್‍ಸೈಟ್ ವಿಳಾಸ ಎಲ್ಲಿದೆ? ಇಂತಹ ವಿಚಾರದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು ನಿಮ್ಮ ಕರ್ತವ್ಯ. ಕೋರ್ಟ್ ಆದೇಶದ ಬಗ್ಗೆ ನಿಮಗೆ ಅರಿವಿಲ್ಲವೇ? ಕೋರ್ಟ್‍ಗೆ ಸ್ಪಷ್ಟವಾದ ಅಂಕಿಅಂಶಗಳ ಮಾಹಿತಿ ನೀಡಬೇಕು ಎಂದರು.
ಹೈಕೋರ್ಟ್ ಆದೇಶದ ನಂತರ ಫ್ಲೆಕ್ಸ್‍ಗಳ ತೆರವಿನ ಬಗ್ಗೆ ಕಾರ್ಯಪ್ರವೃತ್ತರಾಗಿರುವುದಾಗಿ ಹೇಳುತ್ತಿದ್ದೀರಾ. ಅದಕ್ಕೂ ಮೊದಲು ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದರು? ಇಲ್ಲಿಯವರೆಗೂ ಎಷ್ಟು ಫ್ಲೆಕ್ಸ್‍ಗಳ ತೆರವು ನಡೆದಿದೆ. ನಮಗೆ ನಿಮ್ಮ ಸಬೂಬುಗಳು ಬೇಕಿಲ್ಲ ಎಂದು ರೇಗಿದರು.
ಫ್ಲೆಕ್ಸ್ ತೆರವು ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಮಂದಿಯನ್ನು ಬಂಧಿಸಿದ್ದೀರಾ ಎಂದು ಪ್ರಶ್ನಿಸಿದರು.
ಪಾಲಿಕೆ ಪರ ವಕೀಲರಾದ ಶ್ರೀನಿಧಿಯವರು ಉತ್ತರ ನೀಡಿ, ನಿನ್ನೆಯಿಂದ ಅಧೀನ ನ್ಯಾಯಾಲಯ ವಿಚಾರಣೆ ಆರಂಭಿಸಿದೆ. ಆ.18ಕ್ಕೆ ವಿಚಾರಣೆ ಮುಂದೂಡಿದೆ. ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಬಿಬಿಎಂಪಿ ಪರ ವಕೀಲ ಶ್ರೀನಿಧಿ ನೀಡಿದ ಉತ್ತರಕ್ಕೆ ಗರಂ ಆದ ಸಿಜೆ, ಆದೇಶದ ಪ್ರತಿ ಕೋರ್ಟ್‍ಗೆ ಅಪ್‍ಲೋಡ್ ಆಗಿರುತ್ತದೆ ಅಲ್ಲವೇ? ಆ ಸಂಗತಿ ನಿಮಗೆ ತಿಳಿದಿಲ್ಲವೇ?ಶೀಘ್ರದಲ್ಲೇ ಅನಧಿಕೃತ ಫ್ಲೆಕ್ಸ್‍ಗಳ ವಿಚಾರಣೆ ಮುಗಿಸಬೇಕು. ನಿಮ್ಮ ಅಧಿಕಾರಿಗಳು ಈಗಲೂ ಕೋರ್ಟ್‍ನ ಆದೇಶಗಳ ಬಗ್ಗೆ ಅರ್ಥ ಮಾಡಿಕೊಂಡಿಲ್ಲ. ಕೂಡಲೇ ಪ್ರಕರಣ ಕುರಿತು ಚಾರ್ಜ್‍ಶೀಟ್‍ನ್ನು ಕೋರ್ಟ್‍ಗೆ ಸಲ್ಲಿಸುವಂತೆ ಸೂಚಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ