ಟರ್ಕಿ ಆರ್ಥಿಕ ಬಿಕ್ಕಟ್ಟು ಎಫೆಕ್ಟ್, ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದ ರೂಪಾಯಿ!

ಮುಂಬೈ: ಭಾರತೀಯ ರೂಪಾಯಿ ಮೌಲ್ಯ ಇತಿಹಾಸದಲ್ಲೇ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು, ರೂಪಾಯಿ ಮೌಲ್ಯ 70 ರೂಗಳ ಗಡಿಯಲ್ಲಿದೆ.
ಮೂಲಗಳ ಪ್ರಕಾರ ಟರ್ಕಿ ಆರ್ಥಿಕ ಬಿಕ್ಕಟ್ಟು ಭಾರತದ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಇನ್ನು ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಆರ್ ಬಿಐ ಆಲೋಚನೆಯಲ್ಲಿದ್ದು, ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದರೆ ತಾನು ಮಧ್ಯ ಪ್ರವೇಶ ಮಾಡಿ ಆರ್ಥಿಕ ನಿಯಮಗಳಲ್ಲಿ ಬದಲಾವಣೆ ತಂದು ರೂಪಾಯಿ ಮೌಲ್ಯ ಕುಸಿತ ತಡೆಯಲು ಯತ್ನಿಸುವ ಸಾಧ್ಯತೆ ಇದೆ.
ಕಳೆದ ವಾರವಿಡೀ ಚೇತೋಹಾರಿ ವಹಿವಾಟು ಕಂಡಿದ್ದ ಷೇರು ಮಾರುಕಟ್ಟೆ ಇಂದು ಆರಂಭದಲ್ಲೇ ಕುಸಿತಕಂಡಿದೆ. ಪ್ರಮುಖವಾಗಿ ಸಂಸ್ಥೆಗಳ ತ್ರೈಮಾಸಿಕ ವರದಿಯಲ್ಲಿ ಸಾಕಷ್ಚು ಪ್ರಮುಖ ಸಂಸ್ಥೆಗಳೇ ನಷ್ಟ ಅನುಭವಿಸಿರುವುದು ಮಾರುಕಟ್ಟೆಯ ನಕಾರಾತ್ಮಕ ವಹಿವಾಟಿಗೆ ಕಾರಣ ಎನ್ನಲಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 280 ಅಂಕಗಳ ಕುಸಿತ ಕಂಡಿದ್ದು, ನಿಫ್ಟಿ 11350 ಅಂಕಗಳಿಗೆ ಕುಸಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ