ಕೋಲ್ಕತ್ತಾ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 89 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಟರ್ಜಿ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಗಸ್ಟ್ 10ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೆಂಟಿಲೇಟರ್ ಸಹಾಯದಿಂದ ಕೃತಕ ಉಸಿರಾಟ ನಡೆಸುತ್ತಿದ್ದರು. ಅವರಿಗೆ ನಿರಂತರವಾಗಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಸುಮಾರು 12 ವೈದ್ಯರ ತಂಡ ಚಟರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಜುಲೈ ತಿಂಗಳಲ್ಲಿ ಹೆಮೋರ್ಹಾಗಿಕ್ ಸ್ಟ್ರೋಕ್ ಉಂಟಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದರು.
ಹತ್ತು ಬಾರಿ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದ ಸೋಮನಾಥ ಚಟರ್ಜಿ 2004ರಿಂದ 2009ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.
ಇಂಡೋ ಅಮೆರಿಕಾದ ನ್ಯೂಕ್ಲಿಯರ್ ಒಪ್ಪಂದ ವಿಚಾರದಲ್ಲಿ ಕಮ್ಯುನಿಸ್ಟ್ ಪಾರ್ಟಿಯು ಕಾಂಗ್ರೆಸ್ಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಸಂದರ್ಭದಲ್ಲಿ ಅದನ್ನು ನಿರಾಕರಿಸಿದ ಕಾರಣ ಅವರು ರಾಜಕಾರಣದಿಂದಲೇ ತೆರೆಮರೆಗೆ ಸರಿಯಬೇಕಾಯಿತು.