ಅಪ್ರಾಪ್ತರ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ: ರಾಷ್ಟ್ರಪತಿ ಅಸ್ತು

ಹೊಸದಿಲ್ಲಿ: 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ

ಮಾಡಿ ಶಿಕ್ಷೆಗೊಳಗಾದವರಿಗೆ ಮರಣದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ಕ್ರಿಮಿನಲ್‌ ಕಾನೂನು(ತಿದ್ದುಪಡಿ) ಕಾಯಿದೆ 2018ಕ್ಕೆರಾಷ್ಟ್ರಪತಿ

ರಾಮನಾಥ್‌ ಕೋವಿಂದ್‌ ಅವರು ಅಂಕಿತ ಹಾಕಿದ್ದಾರೆ.
ಕಠುವಾದಲ್ಲಿ ಬಾಲಕಿ ಮತ್ತು ಉನ್ನಾವೋದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರಗಳ ಬಳಿಕ ದೇಶಾದ್ಯಂತ ಎದ್ದ ಆಕ್ರೋಶಕ್ಕೆ ಪ್ರತಿಯಾಗಿ ಈ ತಿದ್ದುಪಡಿ ಕಾನೂನು ರೂಪಿಸಲಾಗಿದೆ. ಹೊಸ ಕಾಯಿದೆಯಡಿ ಭಾರತೀಯ ದಂಡ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯಿದೆ 1872, ಅಪರಾಧ ದಂಡ ಸಂಹಿತೆ 1973, ಪೋಸ್ಕೋ ಕಾಯಿದೆ 2012ರಲ್ಲೂ ಕೆಲವೊಂದು ಬದಲಾವಣೆಗಳಿಗೆ ಕಾರಣವಾಗಲಿದೆ.
ಹೊಸ ಕಾಯಿದೆ: ಕಠಿಣ ಶಿಕ್ಷೆ ಅವಕಾಶ 
-12ರಿಂದ 16 ವರ್ಷದೊಳಗಿನ ಹೆಣ್ಮಕ್ಕಳ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ
– 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆ ಅವಕಾಶ
– ಮಹಿಳೆಯರ ಅತ್ಯಾಚಾರಕ್ಕೆ ಕನಿಷ್ಠ ಶಿಕ್ಷೆ ಅವಧಿ 7ರಿಂದ 10 ವರ್ಷಕ್ಕೆ ಹೆಚ್ಚಳ
– 16 ವರ್ಷದೊಳಗಿನವರ ಅತ್ಯಾಚಾರಕ್ಕೆ ಕನಿಷ್ಠ ಶಿಕ್ಷೆ ಅವಧಿ 10ರಿಂದ 20 ವರ್ಷಕ್ಕೆ ಹೆಚ್ಚಳ, ಅಥವಾ ಸಾಯೋವರೆಗೆ ಶಿಕ್ಷೆ ವಿಧಿಸಲೂಬಹುದು.
– 16 ವರ್ಷದೊಳಗಿನ ಬಾಲಕಿಯರ ಗ್ಯಾಂಗ್‌ ರೇಪ್‌ಗೆ ಜೀವನಪರ್ಯಂತ ಜೈಲು ಶಿಕ್ಷೆ
– 12 ವರ್ಷದೊಳಗಿನ ಹೆಣ್ಮಕ್ಕಳ ಅತ್ಯಾಚಾರಿಗಳ ಕನಿಷ್ಠ ಶಿಕ್ಷೆ ಅವಧಿ 20 ವರ್ಷ. ಜೀವನ ಪರ‍್ಯಂತ ಜೈಲು ಶಿಕ್ಷೆ ಅಥವಾ ಮರಣದಂಡನೆವರೆಗೂ ವಿಸ್ತರಿಸಲು ಅವಕಾಶ.
– 12 ವರ್ಷದೊಳಗಿನ ಹೆಣ್ಮಕ್ಕಳ ಸಾಮೂಹಿಕ ಅತ್ಯಾಚಾರಕ್ಕೆ ಜೀವನಪರ್ಯಂತ ಶಿಕ್ಷೆ ಅಥವಾ ಮರಣದಂಡನೆ.

ತ್ವರಿತ ತನಿಖೆ ಮತ್ತು ವಿಚಾರಣೆ 
– ಎಲ್ಲ ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಎರಡು ತಿಂಗಳ ಒಳಗೆ ಮುಗಿಸಬೇಕು.
– ಕೋರ್ಟ್‌ನಲ್ಲಿ ವಿಚಾರಣೆಗೂ ಎರಡು ತಿಂಗಳ ಗಡುವು
-16 ವರ್ಷದೊಳಗಿನ ಹೆಣ್ಮಕ್ಕಳ ಅತ್ಯಾಚಾರ, ಗ್ಯಾಂಗ್‌ ರೇಪ್‌ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಇಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ