ಚೆನ್ನೈ:ಆ-13: ಡಿಎಂಕೆ ಮುಖ್ಯಸ್ಥ, ಮಾಜಿ ಸಿಎಂ ಕರುಣಾನಿಧಿ ಸಾವಿನ ಬಳಿಕ ಈಗ ಪಕ್ಷದಲ್ಲಿ ಉತ್ತರಾಧಿಕಾರಕ್ಕಾಗಿ ಸಂಘರ್ಷ ಆರಂಭವಾಗಿದೆ. ಸಹೋದರ ಸ್ಟಾಲಿನ್ ವಿರುದ್ದ ಅಳಗಿರಿ ಬಹಿರಂಗ ಸಮರ ಆರಂಭಿಸಿದ್ದು, ತಮಗೆ ಡಿಎಂಕೆಯ ಎಲ್ಲರ ಬೆಂಬಲವಿದೆ ಎಂದು ಘೋಷಿಸಿ, ಪಕ್ಷದ ನೈಜ ಸದಸ್ಯರು ತಮ್ಮ ಬೆಂಬಲಕ್ಕಿದ್ದಾರೆ ಎಂದು ಹೇಳಿದ್ದಾರೆ.
ಚೆನ್ನೈನ ಮರಿನಾ ಬೀಚ್ನಲ್ಲಿರುವ ಕರುಣಾನಿಧಿ ಅವರ ಸಮಾಧಿಯ ಬಳಿ ಮಾತನಾಡಿದ ಅಳಗಿರಿ, ಪಕ್ಷದ ನೈಜ ಸದಸ್ಯರು ಹಾಗೂ ತಮಿಳುನಾಡಿನಲ್ಲಿರುವ ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ನನ್ನ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ. ಈ ಹಿಂದೆ ನಡೆದ ಕಹಿ ಘಟನೆಗಳ ಬಗ್ಗೆ ನನಗೆ ಬೇಸರವಿದೆ. ಅಷ್ಟನ್ನು ಮಾತ್ರ ನಾನು ಹೇಳಬಯಸುತ್ತೇನೆ ಎಂದರು.
ಎಂ.ಕೆ. ಸ್ಟಾಲಿನ್ ಕುರುಣಾನಿಧಿಗೆ ಪ್ರೀತಿಪಾತ್ರರಾಗಿದ್ದವರು ಮತ್ತು ಕರುಣಾನಿಧಿಯವರ ವಾರಸುದಾರ ಎಂದೇ ಕರೆಸಿಕೊಂಡಿದ್ದರು. ಆದರೆ ಮತ್ತೊಬ್ಬ ಮಗ ಅಳಗಿರಿ ಈಗ ಪ್ರತಿರೋಧ ಒಡ್ಡಿದ್ದು, ಸ್ಟಾಲಿನ್ ಡಿಎಂಕೆಯ ಮುಂದಿನ ಅಧಿಪತಿಯಲ್ಲ ಎಂದಿದ್ದಾರೆ.
ಒಟ್ಟಾರೆ ಕರುಣಾನಿಧಿ ಬಳಿಕ ಪಕ್ಷದ ನಾಯಕತ್ವಕ್ಕಾಗಿ ಸಹೋದರರಲ್ಲೇ ಸಂಘರ್ಷ ಆರಂಭವಾಗಿದ್ದು, ನಾಳೆ ನಡೆಯುವ ಡಿಎಂಕೆ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರ ಬೀಳಲಿದೆ.
DMK,Alagiri,M K Stalin