ಸಾಲಕ್ಕೆ ಆಧಾರ್ ಸಂಖ್ಯೆ ಜೋಡಣೆ ಬಳಿಕ ಆರು ಸಾವಿರ ನಕಲಿ ಖಾತೆಗಳು ಪತ್ತೆ

 

ಬೆಂಗಳೂರು, ಆ.13-ಕೃಷಿ ಸಾಲದಲ್ಲಿ ನಡೆಯುವ ಅವ್ಯವಹಾರವನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಲಕ್ಕೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ ನಂತರ ಸುಮಾರು ಆರು ಸಾವಿರ ನಕಲಿ ಖಾತೆಗಳು ಪತ್ತೆಯಾಗಿದ್ದು, 50ಕೋಟಿ ಹಣ ದುರುಪಯೋಗದ ಮಾಹಿತಿ ಇದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಂಡ್ಯದಲ್ಲಿ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬ ಸತ್ತುಹೋದ ವ್ಯಕ್ತಿಯೊಬ್ಬರ ಹೆಸರಿನಲ್ಲಿ 2.30 ಲಕ್ಷ ಸಾಲ ಪಡೆದಿರುವ ಬಗ್ಗೆ ಆತನ ಮೊಮ್ಮಗ ದೂರು ನೀಡಿದ್ದಾರೆ. ಈ ರೀತಿ ಕಾರ್ಯದರ್ಶಿಗಳೇ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡು ಬೇನಾಮಿ ಸಾಲ ಪಡೆದಿರುವ ಸಾಕಷ್ಟು ಪ್ರಕರಣಗಳಿವೆ. ಇವುಗಳಿಗೆ ಕಡಿವಾಣ ಹಾಕಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲಾಗುತ್ತಿದೆ ಎಂದರು.
ಹೊಸದಾಗಿ ಸರ್ಕಾರಿ ಆದೇಶ ಹೊರಡಿಸಿದ್ದು, ಇನ್ನು ಮುಂದೆ ಸಾಲ ಪಡೆದವರು, ಸಾಲ ಪಡೆದ ಮೊತ್ತ ಮತ್ತು ಸಾಲ ಮನ್ನಾದ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಸಹಕಾರಿ ಬ್ಯಾಂಕ್‍ನ ನೋಟಿಸ್ ಬೋರ್ಡ್‍ನಲ್ಲಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು
ಸ್ವ ಸಹಾಯ ಗುಂಪುಗಳ ಕೌಶಲ್ಯ ಮತ್ತು ಉದ್ಯಮ ಶೀಲತೆಯನ್ನು ವೃದ್ಧಿಗೊಳಿಸಲು ಸಹಕಾರ ಸಂಸ್ಥೆಗಳ ಮೂಲಕ 10ಲಕ್ಷ ವರೆಗೆ ಸಾಲ ನೀಡುವ ಕಾಯಕ ಯೋಜನೆ ಮತ್ತು ಮೊಬೈಲ್ ಫೈನಾನ್ಸ್ ಯೋಜನೆಯನ್ನು ಸೆ.1ರಿಂದ ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.

ಕಾಯಕ ಯೋಜನೆಗೆ ಈಗಾಗಲೇ ಸರ್ಕಾರಿ ಆದೇಶ ಜಾರಿಯಾಗಿದೆ. ಮೊಬೈಲ್ ಫೈನಾನ್ಸ್ ಯೋಜನೆಗೆ ಶೀಘ್ರವೇ ಸರ್ಕಾರಿ ಯೋಜನೆ ಜಾರಿಗೊಳಿಸಲಾಗುವುದು. ಸಾಲ ಮನ್ನಾ ಯೋಜನೆಗಾಗಿ ಬ್ಯಾಂಕುಗಳಲ್ಲಿ ಸುದೀರ್ಘ ಕಾಲ ಠೇವಣಿ ಇಟ್ಟಿರುವ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ರಾಜ್ಯ ಸರ್ಕಾರ ಖರ್ಚು ಮಾಡಿರುವ 900 ಕೋಟಿ ರೂ. ಅನುದಾನವನ್ನು ವಾಪಸ್ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಇದು ಕೈಗೂಡಿದರೆ ನಮ್ಮ ಆರ್ಥಿಕ ಪರಿಸ್ಥಿತಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ