ಬ್ಲ್ಯೂ ವೇಲ್​ ಆಯ್ತು ಈಗ ಇನ್ನೊಂದು ಡೆಡ್ಲಿ ಗೇಮ್ ಮೊಮೊ ಸರದಿ

ಅರ್ಜಿಂಟೀನಾ:ಆ-13: ವಿಶ್ವಾದ್ಯಂತ ಆತಂಕಕ್ಕೀಡು ಮಾಡಿದ್ದ ಅಪಾಯಕಾರಿ ಬ್ಲ್ಯೂ ವೇಲ್​ ಚಾಲೆಂಜ್​ ಭೀತಿಯಿಂದ ಹೊರ ಬಂದ ಬಳಿಕ ಈಗ ಅಂತದ್ದೇ ಮತ್ತೊಂದು ಭಯಾನಕ ಚಾಲೆಂಜಿಂಗ್​ ಗೇಮ್​ ಸಾಮಾಜಿಕ ಜಾಲತಾಣಗಳಲ್ಲಿ ತಲೆ ಎತ್ತಿದೆ. ಅದೇ ‘ಮೊಮೊ ಚಾಲೆಂಜ್​’.

ಮೊಮೊ ಚಾಲೆಂಜ್​ ಮೊದಲು ಆರಂಭವಾಗಿದ್ದು ಫೇಸ್​ಬುಕ್​ನಲ್ಲಿ. ನಂತರ ವಾಟ್ಸ್​ ಆ್ಯಪ್​ಗೂ ತನ್ನ ಪರಿಮಿತಿ ವಿಸ್ತರಿಸಿಕೊಂಡಿದೆ. ಈ ಮೊಮೊ ಚಾಲೆಂಜ್​ ಸ್ವೀಕರಿಸುವಂತೆ ಅನಾಮಿಕ ಮೊಬೈಲ್​ ಸಂಖ್ಯೆಯಿಂದ ಮೆಸೇಜ್​ ಬರುತ್ತದೆ. ಆ ಸಂಖ್ಯೆಯ ಬಳಕೆದಾರರಿಗೆ ಮೊಮೊ ನೀಡುವ ಚಾಲೆಂಜ್ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ಈ ಚಾಲೆಂಜ್​ ತೆಗೆದುಕೊಂಡ ಬಳಿಕ ಹಂತಹಂತವಾಗಿ ಚಾಲೆಂಜ್​ಗಳನ್ನು ನೀಡುತ್ತಾ ನಂತರ ಹಿಂಸಾತ್ಮಕ ಕೃತ್ಯಗಳನ್ನು ಮಾಡಿ ಚಿತ್ರೀಕರಿಸಿ ನಮಗೆ ಕಳುಹಿಸುವಂತೆ ಸೂಚಿಸಲಾಗುತ್ತದೆ. ಹೀಗೆ ಹಿಂಸಾತ್ಮಕ ಕೃತ್ಯಗಳಿಗೆ ಪ್ರೇರೇಪಿಸುತ್ತಾ ಕೊನೆ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಅಪಾಯಕಾರಿ ಚಾಲೆಂಜ್​ ನೀಡಿ ಮೊಮೊ ಚಾಲೆಂಜ್​ ಮುಗಿಸುವಂತೆ ಆದೇಶಿಸಲಾಗುತ್ತದೆ.

ಒಂದು ವೇಳೆ ಚಾಲೆಂಜ್​ ತೆಗೆದುಕೊಳ್ಳದಿದ್ದರೆ ಅವರ ಮೊಬೈಲ್​ ಸಂಖ್ಯೆಯನ್ನು ಹ್ಯಾಕ್​ ಮಾಡಲಾಗಿದೆ ಎಂದು ಹೇಳಿ ಅವರಿಗೆ ಹೆದರಿಸಿ ಚಾಲೆಂಜ್​ ಪೂರೈಸುವಂತೆ ಬೆದರಿಕೆ ಒಡ್ಡಲಾಗುತ್ತಿದೆ. ಇದೇ ರೀತಿ ಒಂದೊಂದೇ ಚಾಲೆಂಜ್​ಗಳನ್ನು ಮಾಡಿಸುತ್ತಾ, ಕೊನೆ ಹಂತದಲ್ಲಿ ಆತ್ಮಹತ್ಯೆ ಚಾಲೆಂಜ್​ ಅನ್ನೂ ನೀಡಲಾಗುತ್ತಿದೆ.

ಈ ಮೊಮೊ ಚಾಲೆಂಜ್ ಗೆ ಒಳಗಾದ್ ಅರ್ಜೆಂಟೀನಾದ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವನ್ನಪ್ಪಲು ಮೊಮೊ ಚಾಲೆಂಜ್​ ಕಾರಣ ಎಂದು ಪೊಲೀಸರು ತಿಳಿಸಿಾರೆ.

ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಕ್ಷಣಗಳ ಮುಂಚೆ ಆಕೆಯ ಚಟುವಟಿಕೆಗಳನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾಳೆ. ಹಾಗಾಗಿ ತನಿಖೆ ವೇಳೆ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಯಾರೋ ಪ್ರೇರೇಪಿಸಿರುವುದು ತಿಳಿದು ಬಂದಿದೆ ಎಂದು ಬ್ಯೂನೊಸ್ ಏರ್ಸ್​ ಟೈಮ್ಸ್​ ವರದಿ ಮಾಡಿದೆ.

ಈ ಮೊಮೊ ಚಾಲೆಂಜ್​ಗೆ ಮಕ್ಕಳೇ ಪ್ರಮುಖ ಟಾರ್ಗೆಟ್ ಆಗಿದ್ದು, ಅವರಿಂದ ಹಂತ ಹಂತವಾಗಿ ಸರಣಿ ಹಿಂಸಾತ್ಮಕ ಕೃತ್ಯ ಮಾಡಿಸುವುದರ ಜತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ