ಬೆಂಗಳೂರು,ಆ.13- ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದರು ಎಂಬಂತೆ ಬೆಂಗಳೂರಿನಿಂದ ವೈಮಾನಿಕ ಪ್ರದರ್ಶನ(ಏರ್ ಶೋ) ಲಖ್ನೋಗೆ ಸ್ಥಳಾಂತರವಾದ ನಂತರ ಬಿಜೆಪಿ ನಾಯಕರು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ.
ಏರ್ ಶೋ ಬೆಂಗಳೂರಿನಿಂದ ಲಖ್ನೋಗೆ ಸ್ಥಳಾಂತರವಾಗಿರುವುದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಜೆಪಿಯ ನಾಯಕರು ಮುಂದಿನ ವರ್ಷ ಇದನ್ನು ಇಲ್ಲಿಯೇ ಮುಂದುವರೆಸಬೇಕೆಂದು ಒತ್ತಾಯಿಸಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಪತ್ರ ಬರೆದಿದ್ದಾರೆ.
ಬೆಂಗಳೂರನ್ನು ಪ್ರತಿನಿಧಿಸುವ ಹಾಗೂ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ನಿರ್ಮಲಾ ಸೀತಾರಾಮನ್‍ಗೆ ಬೆಂಗಳೂರಿನಲ್ಲೇ ಏರ್ ಶೋ ಆಯೋಜಿಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
2019ರ ಫೆಬ್ರವರಿಯಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸವಲತ್ತುಗಳನ್ನು ರಾಜ್ಯ ಸರ್ಕಾರ ನೀಡಲಿದೆ. ವೈಮಾನಿಕ ಪ್ರದರ್ಶನ ಬೆಂಗಳೂರಿನ ಪ್ರತಿಷ್ಠೆಯೂ ಹೌದು. ಇಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಬೆಂಗಳೂರಿನಿಂದ ಸ್ಥಳಾಂತರ ಮಾಡುವ ಪ್ರಸ್ತಾವನೆಯನ್ನು ಕೈ ಬಿಡಬೇಕೆಂದು ಸಂಸದರು ಪತ್ರದಲ್ಲಿ ಕೋರಿದ್ದಾರೆ.
ನಿಯೋಗದಿಂದಲೂ ಭೇಟಿ:
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದೆಂದು ಮನಗಂಡಿರುವ ಬಿಜೆಪಿ ನಾಯಕರು ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿ ನಡೆಸಲು ಶೀಘ್ರದಲ್ಲೇ ಬಿಜೆಪಿ ನೇತೃತ್ವದ ನಿಯೋಗ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದೆ.
ಸ್ಥಳಾಂತರವು ರಾಜಕೀಯ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಾನಿಯಾಗಬಹುದೆಂಬ ಭೀತಿಯಿಂದ ಬಿಜೆಪಿ ನಾಯಕರು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಏರೋ ಶೋ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಈ ವಿಷಯವೇ ಪ್ರಧಾನವಾಗುವ ಸಾಧ್ಯತೆ ಇರುವುದನ್ನು ಮನಗಂಡು ಬಿಜೆಪಿ ಶತಾಯಗತಾಯ ಬೆಂಗಳೂರಿನಲ್ಲೇ ಏರ್ ಶೋ ನಡೆಸಲು ಕೇಂದ್ರದ ಮೇಲೆ ಒತ್ತಡದ ತಂತ್ರ ಅನುಸರಿಸಲು ಮುಂದಾಗಿದೆ.