ಬೆಂಗ್ಳೂರಿನ ಹೈಕೋರ್ಟ್ ಬಳಿಯೇ ಕಿಕಿ ಡ್ಯಾನ್ಸ್: ಯುವತಿಯ ಮೋಜು ಮಸ್ತಿ

ಬೆಂಗಳೂರು: ದಿನದಿಂದಕ್ಕೆ ಹೆಚ್ಚಾಗುತ್ತಿದ್ದ ಅಪಾಯಕಾರಿ ಕಿಕಿ ಡ್ಯಾನ್ಸ್ ಚಾಲೆಂಜ್ ನನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಆದರೆ ಈ ಮಧ್ಯೆ ಯುವತಿಯೊಬ್ಬಳು ನಗರದ ಹೈಕೋರ್ಟ್ ಬಳಿಯೇ ಡ್ಯಾನ್ಸ್ ಮಾಡಿದ್ದಾಳೆ.

ಹೈಕೋರ್ಟ್ ಹಿಂಭಾಗದಲ್ಲಿ ಯುವತಿ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಭಾನುವಾರ ರಜೆ ಇದ್ದ ಕಾರಣ ಯುವತಿ ಸಂಜೆ ಕಬ್ಬನ್ ಪಾರ್ಕ್ ಬಳಿ ಇರುವ ಹೈಕೋರ್ಟ್ ಬಳಿ ಕಾರಿನಲ್ಲಿ ಹೋಗಿದ್ದಾಳೆ. ಬಳಿಕ ಯಾರು ಇಲ್ಲದ ವೇಳೆ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಹೋಗಿದ್ದಾಳೆ. ಅಲ್ಲದೇ ಡ್ಯಾನ್ಸ್ ಮಾಡುತ್ತಲೇ ಯುವತಿ ಕಾರ್ ಹತ್ತಿದ್ದಾಳೆ. ಈ ಎಲ್ಲ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರು ಕಿಕಿ ಚಾಲೆಂಜ್ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು ಯುವಕ-ಯುವತಿಯರು ಕಿಕಿ ಚಾಲೆಂಜ್ ಮಾಡುತ್ತಿದ್ದಾರೆ. ಮೊದಲಿಗೆ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಕಿಕಿ ಚಾಲೆಂಜ್ ಮಾಡಿದ್ದರು. ಬಳಿಕ ಆಕೆಯ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೂಡ ಆಗಿತ್ತು. ನಂತರ ಈ ಬಗ್ಗೆ ಗೊತ್ತಿರಲಿಲ್ಲ ಎಂದು ನಿವೇದಿತಾ ಗೌಡ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಇದಾದ ನಂತರ ನಟಿ ಪ್ರಣಿತಾ ಕೂಡ ಕಿಕಿ ಡ್ಯಾನ್ಸ್ ಮಾಡಿದ್ದರು.

ನಟ-ನಟಿಯರು ಮಾತ್ರವಲ್ಲದೇ ಮಕ್ಕಳು ಕೂಡ ಈ ಡ್ಯಾನ್ಸ್ ಮಾಡುತ್ತಿದ್ದಾರೆ. ಕಾರ್ ಮಾತ್ರವಲ್ಲದೇ ಬೈಕ್, ಟ್ರೈನ್ ಮುಂದೆಯೂ ಡ್ಯಾನ್ಸ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಈ ಚಾಲೆಂಜ್ ಟ್ರೆಂಡಿಂಗ್ ನಲ್ಲಿದೆ. ಈಗ ಈ ಚಾಲೆಂಜ್ ಜೊತೆ ಮೋಮೋ ಚಾಲೆಂಜ್ ಗೇಮ್ ಕೂಡ ಬಂದಿದೆ.

ಏನಿದು ಚಾಲೆಂಜ್ ?
ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್ ” ಹಾಡು ಹೇಳಿಕೊಂಡು ಕಾರಿನ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಮೋಮೋ ಚಾಲೆಂಜ್ ಆಟ 
ಮೊದಲು ಅಪರಿಚಿತ ನಂಬರಿನಿಂದ ಎಲ್ಲರಿಗೂ ಒಂದು ಸಂದೇಶವನ್ನು ಬರುತ್ತದೆ. ಬಳಿಕ ಆ ಚಾಲೆಂಜ್ ಒಪ್ಪಿಕೊಂಡರೆ ಹಾಯ್-ಹಲೋ ಎಂದು ಸಂದೇಶ ಕಳುಹಿಸಬೇಕಾಗುತ್ತದೆ. ನಂತರ ಒಂದು ಅಪರಿಚಿತ ನಂಬರ್ ಕೊಟ್ಟು ಮಾತನಾಡುವಂತೆ ಚಾಲೆಂಜ್ ನೀಡುತ್ತದೆ. ಬಳಕೆದಾರರಿಗೆ ಕೆಲವು ಕೆಲಸಗಳನ್ನು ಕೊಡಲಾಗುತ್ತದೆ. ಒಂದು ವೇಳೆ ಆ ಕೆಲಸವನ್ನು ಅವರು ಪೂರ್ಣ ಮಾಡದಿದ್ದರೆ, ಬಳಕೆದಾರಿಗೆ ಬೆದರಿಕೆ ಒಡ್ಡುತ್ತದೆ. ಕೊನೆಯದಾಗಿ ಬೆದರಿಕೆ ಮತ್ತು ಭಯದಿಂದ ಬಳಕೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ