ಭಾರಿ ಮಳೆಗೆ ಕೇರಳ ತತ್ತರ: ಯೋಧರ 24X7 ಕಾರ್ಯಾಚರಣೆಗೆ ಮೆಚ್ಚುಗೆ

ಕೇರಳ: ಯಮರೂಪಿ ಮಳೆಗೆ ತತ್ತರಿಸಿರುವ ಕೇರಳಿಗರ ರಕ್ಷಣೆಗೆ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು, ಭಾರತೀಯ ಸೇನೆಯನ್ನೊಳಗೊಂಡ 40 ಸಂಯೋಜಿತ ತಂಡಗಳು ಹಗಲಿರುಳೆನ್ನದೆ ಶ್ರಮಿಸುತ್ತಿವೆ. ರಕ್ಷಣಾ ಪಡೆ ಸಂಕಷ್ಟದಲ್ಲಿರುವ ಜನರ ರಕ್ಷಣೆಗಾಗಿ ತಮ್ಮ ಜೀವವನ್ನೂ ಲೆಕ್ಕಿಸದೆ ಕಾರ್ಯಾಚರಣೆ ನಡೆಸುತ್ತಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಡಿಫೆನ್ಸ್​ ಸೆಕ್ಯುರಿಟಿ ಕಾರ್ಪ್ಸ್​ ಸೆಂಟರ್​ ಹಾಗೂ ಬಿಸನ್​ ಡಿವಿಷನ್ 24X7 ಸೇವೆಯಲ್ಲಿ ನಿರತವಾಗಿದೆ. ಮೂರಕ್ಕೂ ಹೆಚ್ಚು ಎಂಜಿನಿಯರ್​ಗಳು ಹಾಗೂ 100ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಒಳಗೊಂಡ ತಂಡವೊಂದು ತಮ್ಮ ಸಮಯೋಚಿತ ಬುದ್ಧಿ  ಬಳಸಿ, ಜನರ ಅನುಕೂಲಕ್ಕಾಗಿ ಆ ಸ್ಥಳದಲ್ಲಿಯೇ ಸೇತುವೆಯೊಂದನ್ನು ನಿರ್ಮಿಸಿರುವ ವಿಡಿಯೋ ಲಭ್ಯವಾಗಿದೆ.

ರಕ್ಷಣಾ ಕಾರ್ಯಾಚರಣೆ ನಡೆಸುವ ವೇಳೆ ಈ ತಂಡವು ರಸ್ತೆ ಕುಸಿದಿರುವುದನ್ನು ಕಂಡು, ಅದಕ್ಕೆ ಪರ್ಯಾಯವಾಗಿ ಒಂದು ಯೋಜನೆ ಮಾಡಿದ್ದಾರೆ. ತಕ್ಷಣವೇ ಸುತ್ತಲಿದ್ದ ಉದ್ದದ ತೆಂಗಿನ ಮರ ಹಾಗೂ ಮರದ ತುಂಡುಗಳನ್ನು ಬಳಸಿ, ಸುಸಜ್ಜಿತವಾದ ಸೇತುವೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಜನರನ್ನು ಸುರಕ್ಷಿತವಾಗಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಯೋಚಿಸಿ, ಆ ಕ್ಷಣವೇ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸುವ ಮೂಲಕ ಜನರನ್ನು ರಕ್ಷಿಸಿದ ಯೋಧರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ