ಬೆಂಗಳೂರು, ಆ. 13- ಕೆಂಗಲ್ ಹನುಮಂತಯ್ಯನವರ ಹೆಸರಿನಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನಾರ್ಹ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‍ನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂಭ್ರಮಾಚರಣೆ ಮತ್ತು ಕೆಂಗಲ್ ಹನುಮಂತಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ವತಿಯಿಂದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯ. ಹೀಗೆ ಸಾಧಕರನ್ನು ಗುರುತಿಸಿ ಗೌರವಿಸುವುದು ಸಾಮಾಜಿಕ ಕರ್ತವ್ಯವಾಗಬೇಕು ಎಂದು ಹೇಳಿದರು.
ಪ್ರಶಸ್ತಿಗಳು ಪ್ರಾಮಾಣಿಕವಾಗಿ ಸಾಧಕರಿಗೆ ಸಲ್ಲಬೇಕು. ಪ್ರಶಸ್ತಿ ಪ್ರದಾನ ಮಾಡುವವರು ಮತ್ತು ಪಡೆದುಕೊಳ್ಳುವವರು ಹೆಮ್ಮೆ ಪಡುವಂತಿರಬೇಕು. ಅಂತಹ ಪ್ರಶಸ್ತಿಗಳಿಗೆ ಮಾತ್ರ ಮೌಲ್ಯಯುತವಾಗಿರುತ್ತದೆ ಎಂದರು.
ಪ್ರಶಸ್ತಿಗಳನ್ನು ಪಡೆದುಕೊಳ್ಳಬೇಕೆ ಹೊರತು ಅದನ್ನು ಹೊಡೆದುಕೊಳ್ಳಬಾರದು ಎಂದುತಿಳಿಸಿದರು.
ಹಿರಿಯ ವಿದ್ವಾಂಸ ಪಾವಗಡ ಪ್ರಕಾಶ್ ರಾವ್ ಮಾತನಾಡಿ, ಸ್ವಾತಂತ್ರ್ಯ ಪಡೆಯುವುದಕ್ಕಾಗಿ ನಡೆದ ಹೋರಾಟಗಳ ಬಗ್ಗೆ ಈಗಿನ ಯುವಕರಿಗೆ ಅರಿವಿಲ್ಲ. ಗಾಂಧೀಜಿ ಅವರು ಒಂದು ಕರೆ ನೀಡಿದರೆ ಸಾವಿರಾರು ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಅವರಿಗೆ ಮತ್ತೆ ನಾವು ಮನೆಗೆ ಹೋಗುತ್ತೇವೆ ಎಂಬ ಭರವಸೆ ಇಲ್ಲದಿದ್ದರೆ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 35 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಮೈಸೂರು ಸಿಲ್ಕ್ ಕ್ಲಾತ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ ಆರ್.ಪಿ.ರವಿಶಂಕರ್, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ವುಡೇ.ಪಿ. ಕೃಷ್ಣ ಮುಂತಾದವರು ಇದ್ದರು.