ಪರಭಾಷಿಗರ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿ ವಾಟಾಳ್ ಪ್ರತಿಭಟನೆ

 

ಬೆಂಗಳೂರು, ಆ.11-ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದೊದಗಿದೆ. ಕನ್ನಡ ಭಾಷೆ ಅಪಾಯದಲ್ಲಿದೆ. ನಮ್ಮ ನಾಡಿನಲ್ಲಿ ಕನ್ನಡಿಗರು ಅತಂತ್ರರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪರಭಾಷಿಗರ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಅವರು, ಆಡಳಿತದಲ್ಲಿ ಕನ್ನಡ ಭಾಷೆ ಸಮರ್ಪಕವಾಗಿ ಜಾರಿಯಾಗಿಲ್ಲ. ಕರ್ನಾಟಕದ ಕಲೆ, ಸಂಸ್ಕøತಿ, ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಳುವ ಸರ್ಕಾರ ರೂಪಿಸದೆ ಕಡೆಗಣಿಸುತ್ತಿವೆ. ಕರ್ನಾಟಕ ಏಕೀಕರಣದ ಉದ್ದೇಶ ಈಡೇರಿಲ್ಲ ಎಂದು ಆರೋಪಿಸಿದರು.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಬಗ್ಗೆ ಯಾವ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಚಾಮರಾಜನಗರದಿಂದ ಬೀದರ್‍ವರೆಗೂ, ಮಂಗಳೂರಿನಿಂದ ಕೋಲಾರದವರೆಗೂ ಕನ್ನಡ ಕಡೆಗಣನೆಯಾಗುತ್ತಿದೆ. ಅನ್ಯ ಭಾಷೆಗಳು ವಿಜೃಂಭಿಸುತ್ತಿವೆ. ಕನ್ನಡಿಗರಿಗೆ ಉದ್ಯೋಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು.

ಹೊರನಾಡ ಕನ್ನಡಿಗರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಕಾಸರಗೋಡು ಕರ್ನಾಟಕಕ್ಕೆ ಸೇರಲಿಲ್ಲ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಎಲ್ಲಾ ವಿಚಾರದಲ್ಲೂ ರಾಜ್ಯವನ್ನು ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.
ರಾಜಧಾನಿ ಬೆಂಗಳೂರು ಕನ್ನಡಿಗರ ಪಾಲಿಗೆ ಗಗನ ಕುಸುಮವಾಗಿದೆ. ಪರಭಾಷಿಗರ ಹಾವಳಿ, ಪರಭಾಷಾ ಚಿತ್ರಗಳ ಅತಿರೇಕದಿಂದ ಕನ್ನಡಕ್ಕೆ ಮಾನ್ಯತೆ ಇಲ್ಲದಂತಾಗಿದೆ. ನಾವು ಎಚ್ಚರ ವಹಿಸದಿದ್ದರೆ ಇತಿಹಾಸ ಸೇರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಲಕ್ಷಾಂತರ ಪರಭಾಷಿಗರು ವಲಸೆ ಬಂದು ನೆಲೆಸಿದ್ದಾರೆ. ಇದರಿಂದ ಕನ್ನಡಿಗರಿಗೆ ಧಕ್ಕೆಯಾಗಿದೆ. ಕನ್ನಡ ವಿರೋಧಿ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದರೂ ಯಾವುದೇ ಕ್ರಮವಿಲ್ಲ ಎಂದು ಹೇಳಿದ ಅವರು, ನ್ಯಾಯಾಲಯಗಳಲ್ಲಿ ಕನ್ನಡಕ್ಕೆ ಮಾನ್ಯತೆ ಇಲ್ಲದಂತಾಗಿದೆ ಎಂದು ವಾಟಾಳ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ