ಮೈಸೂರು, ಆ.11- ಅಧಿಕಾರಿಗಳ ವರ್ಗಾವಣೆ ದಂಧೆ ಬಗ್ಗೆ ದಾಖಲೆ ಇದ್ದರೆ ಒದಗಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ದಂಧೆ ಎಲ್ಲಿ ನಡೆದಿದೆ ? ವಿನಾಃಕಾರಣ ಆರೋಪ ಮಾಡಬಾರದು. ಮಾಹಿತಿ ಇದ್ದರೆ ನೀಡಬೇಕು. ಪ್ರತಿ ಸರ್ಕಾರವೂ ಪ್ರತಿ ವರ್ಷ ವರ್ಗಾವಣೆ ಮಾಡುವುದು ಆಡಳಿತದ ಒಂದು ಭಾಗ. ಬಿಜೆಪಿಯವರು ಐದು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಆಗ ವರ್ಗಾವಣೆ ದಂಧೆಯನ್ನು ಮಾಡಿದ್ದರೆ ಎಂದು ಪ್ರಶ್ನಿಸಿದರು.
ವರ್ಗಾವಣೆಗೆ ಬಿಜೆಪಿ ಆಡಳಿತದಲ್ಲಿ ಯಾವ ನೀತಿ, ನಿಯಮ ಇಟ್ಟುಕೊಂಡಿದ್ದರು ಎಂದು ಮುಖ್ಯಮಂತ್ರಿಗಳು ಟೀಕಿಸಿದರು.
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ. ಆದರೂ ಸ್ನೇಹಮಯ ಸ್ಪರ್ಧೆ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಿಜೆಪಿಯವರು ಮಾಡುವ ಆಧಾರ ರಹಿತ ಟೀಕೆಗಳಿಗೆ ಜನರು ಕಿವಿಗೊಡಬೇಕಾಗಿಲ್ಲ ಎಂದು ಹೇಳಿದರು.