ರೈತರೊಂದಿಗೆ ಭತ್ತದ ಪೈರುಗಳನ್ನು ನಾಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಮಂಡ್ಯ, ಆ.11- ಗ್ರಾಮವಾಸ್ತವ್ಯದ ಮೂಲಕ ಮನೆ ಮಾತಾಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಸ್ವತಃ ಗದ್ದೆಗಿಳಿದು ನಾಟಿ ಮಾಡುವ ಮೂಲಕ ರೈತರ ಮನಗೆದ್ದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮದ ಗದ್ದೆಯಲ್ಲಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಮುಖಂಡರು ಹಾಗೂ ರೈತರೊಂದಿಗೆ ಭತ್ತದ ಪೈರುಗಳನ್ನು ನಾಟಿ ಮಾಡಿದರು.
ಭತ್ತ ನಾಟಿ ಮಾಡುವ ಮುನ್ನ ಜೋಡೆತ್ತಿಗೆ ಮುಖ್ಯಮಂತ್ರಿ ನಮಸ್ಕರಿಸಿದರು. ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗದ್ದೆಗಿಳಿದು ಭತ್ತ ನಾಟಿ ಮಾಡಲು ಆರಂಭಿಸುತ್ತಿದ್ದಂತೆ ತುಂತುರು ಮಳೆ ಪ್ರಾರಂಭವಾಗಿ ನೆರೆದಿದ್ದ ಜನರಲ್ಲಿ ಸಂತಸವನ್ನು ಉಂಟು ಮಾಡಿತ್ತು.

ಸೀತಾಪುರ ಗ್ರಾಮದ ಐದು ಎಕರೆ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ನಿನ್ನೆಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಾಟಿ ಮಾಡಲು ಆಗಮಿಸಿದ ಮುಖ್ಯಮಂತ್ರಿಗೆ ಸ್ವಾಗತ ಕೋರಲು ತಳಿರು ತೋರಣಗಳಿಂದ ರಸ್ತೆಗಳನ್ನು ಸಿಂಗರಿಸಲಾಗಿತ್ತು. ಎತ್ತಿನ ಗಾಡಿಗಳನ್ನು ಕೂಡ ಅಲಂಕರಿಸಲಾಗಿತ್ತು.
ವಿವಿಧ ಕಲಾತಂಡಗಳಿಂದ ಮುಖ್ಯಮಂತ್ರಿಗಳಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ಸೀತಾಪುರ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ನೆರೆ ಹೊರೆಯ ಗ್ರಾಮಗಳ ಸಾರ್ವಜನಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಮಾರಸ್ವಾಮಿ ಭತ್ತ ನಾಟಿ ಮಾಡುವುದನ್ನು ವೀಕ್ಷಿಸಿದರು.
ಕುಮಾರಸ್ವಾಮಿ ಅವರೊಂದಿಗೆ ಭತ್ತ ನಾಟಿ ಮಾಡಿದ ಕೃಷಿಕರಿಗೆ ಗುರುತಿನ ಚೀಟಿಯನ್ನು ನೀಡಲಾಗಿತ್ತು. ಭತ್ತದ ಗದ್ದೆಯ ಮಾಲೀಕ ದೇವರಾಜು ಸೇರಿದಂತೆ ಹಲವು ರೈತರು ಕುಮಾರಸ್ವಾಮಿ ಜತೆಗೂಡಿ ಭತ್ತ ನಾಟಿ ಮಾಡಿದರು.

ರೈತರ ಸಂಕಷ್ಟಗಳಿಗೆ ಪರಿಹಾರ ಒದಗಿಸಲು ಸರ್ಕಾರ ಸಿದ್ಧವಿದ್ದು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಪರವಾಗಿ ರಾಜ್ಯ ಸರ್ಕಾರ ಸದಾ ಇರುತ್ತದೆ ಎಂಬ ಸಂದೇಶವನ್ನು ನೀಡಿ ರೈತರಲ್ಲಿ ವಿಶ್ವಾಸ ಮೂಡಿಸಿ ಉತ್ಸಾಹ ತುಂಬುವ ಉದ್ದೇಶದಿಂದ ಸಾಂಕೇತಿಕವಾಗಿ ಮುಖ್ಯಮಂತ್ರಿ ಇಂದು ರೈತರೊಂದಿಗೆ ಭತ್ತ ನಾಟಿ ಮಾಡಿದರು.

ಕಳೆದ 2-3 ವರ್ಷಗಳಿಂದ ಮಳೆಕೊರತೆ ಉಂಟಾಗಿ ಜಲಾಶಯ ಭರ್ತಿಯಾಗದೆ ರೈತರು ಭತ್ತ ನಾಟಿ ಮಾಡಿರಲಿಲ್ಲ. ಕೆಆರ್‍ಎಸ್ ಜಲಾಶಯ ಭರ್ತಿಯಾದಾಗ ರೈತರೊಂದಿಗೆ ಭತ್ತ ನಾಟಿ ಮಾಡುವ ಮೂಲಕ ಮಂಡ್ಯ ಜಿಲ್ಲೆ ರೈತರು ಭತ್ತ ಬೆಳೆಯಲು ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಭತ್ತ ನಾಟಿ ಮಾಡಿ ನೀಡಿದ್ದ ಭರವಸೆಯನ್ನು ಈಡೇರಿಸಿದರು.

ನಾಡಿನ ದೊರೆಯೇ ಗದ್ದೆಗಿಳಿದು ನಾಟಿ ಮಾಡಿದ್ದರಿಂದ ಸಹಜವಾಗಿಯೇ ಈ ಭಾಗದ ರೈತರಲ್ಲಿ ಸಂತಸ ಇಮ್ಮಡಿಯಾಗಿತ್ತು. ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಮುಖ್ಯಮಂತ್ರಿಗಳು, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಕೆಲ ಕಾಲ ರೈತರೊಂದಿಗೆ ಭತ್ತ ನಾಟಿ ಮಾಡಿದ ಮುಖ್ಯಮಂತ್ರಿಗಳು, ಸೀತಾಪುರ ಗ್ರಾಮದಲ್ಲೇ ರೈತರೊಂದಿಗೆ ಸಂವಾದ ನಡೆಸಿದರು.

ಬಿಜೆಪಿಗೆ ತಿರುಗೇಟು:
ಭತ್ತ ನಾಟಿ ಮಾಡುವ ಮೂಲಕ ರೈತನ ಮಗನೆಂದು ಸಾಬೀತುಪಡಿಸುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಬಿಜೆಪಿ ಮಾಡುವ ಟೀಕೆಗಳಿಗೂ ಉತ್ತರಿಸಬೇಕಾಗಿಲ್ಲ. ಜನರೇ ಉತ್ತರ ಕೊಡುತ್ತಾರೆ. ತಾವು ರೈತ ಕುಟುಂಬದಲ್ಲಿ ಜನಿಸಿದ್ದು, ರೈತರೊಂದಿಗೆ ಬೆಳೆದುಬಂದ ನನಗೆ ಭತ್ತ ನಾಟಿ ಮಾಡುವುದು ಹೊಸದೇನಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದ್ದಾರೆ.
ಭತ್ತ ನಾಟಿ ಮಾಡುವ ವಿಚಾರದಲ್ಲಿ ಬಿಜೆಪಿಯವರು ಮಾಡುತ್ತಿರುವ ಟೀಕೆಗಳಿಗೆ ಜನರು ಕಿವಿಗೊಡಬಾರದು. ಈ ವಿಚಾರದಲ್ಲೂ ಬಿಜೆಪಿ ಟೀಕೆ ಮಾಡುತ್ತಿರುವುದನ್ನು ನೋಡಿದರೆ ರೈತರ ಪರ ಯಾವ ರೀತಿ ಕಾಳಜಿ, ಯಾವ ಮಟ್ಟದ ಗೌರವಹೊಂದಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.

ಭತ್ತ ನಾಟಿ ಮಾಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ ಸಾಂಕೇತಿಕವಾಗಿ ಭತ್ತ ನಾಟಿ ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾಗಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಆಂಧ್ರಕ್ಕೆ ಭೇಟಿ:
ನೆರೆಯ ಆಂಧ್ರಪ್ರದೇಶದಲ್ಲಿ ಅಜಿಂ ಪ್ರೇಮ್‍ಜಿ ಪ್ರತಿಷ್ಟಾನದಿಂದ ಶೂನ್ಯ ವೆಚ್ಚದಲ್ಲಿ ನೈಸರ್ಗಿಕ ಬೇಸಾಯವನ್ನು ಆರಂಭಿಸಿದ್ದಾರೆ. ಇದರ ವೀಕ್ಷಣೆಗೆ ಆಗಮಿಸುವಂತೆ ಪ್ರತಿಷ್ಠಾನದಿಂದ ಆಹ್ವಾನ ಬಂದಿದ್ದು, ಸದ್ಯದಲ್ಲೇ ಅಲ್ಲಿಗೆ ಭೇಟಿ ನೀಡಿ ನೈಸರ್ಗಿಕ ಕೃಷಿಯನ್ನು ಪರಿಶೀಲಿಸುವುದಾಗಿ ಹೇಳಿದರು.
ಸಚಿವರಾದ ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ, ಶಾಸಕ ಡಾ.ಅನ್ನದಾನಿ, ಹಾಗೂ ಮಂಡ್ಯ ಜಿಲ್ಲಾ ಜೆಡಿಎಸ್ ಮುಖಂಡರು ಈ ಸಂದರ್ಭದಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ