ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಸಿದ್ದರಾಮಯ್ಯ ಹುಚ್ಚು ಹಿಡಿದವರಂತೆ ಆಡುತ್ತಿದ್ದಾರೆ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

 

ಮೈಸೂರು, ಆ.11- ಡಾ.ಜಿ.ಪರಮೇಶ್ವರ್ ಅವರ ಚಿತಾವಣೆಯಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಚ್ಚು ಹಿಡಿದವರಂತೆ ಆಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯಗೆ ಸೋತರೂ ಬುದ್ಧಿ ಬಂದಿಲ್ಲ. ಅವರನ್ನು ಸೋಲಿಸಿದ್ದೇ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಂದು ಹೊಸಬಾಂಬ್ ಸಿಡಿಸಿದರು.
ಹಿಂದಿನ ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿದ್ದರು. ಅದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಪರಮೇಶ್ವರ್ ಚಿತಾವಣೆ ಮಾಡಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲುವಂತೆ ಮಾಡಿದ್ದಾರೆ ಎಂದರು.

ಚಾಮುಂಡೇಶ್ವರಿಯಲ್ಲಿ ಸೋತ ನಂತರ ಅವರು ಹುಚ್ಚರಂತಾಗಿದ್ದಾರೆಂದು ಅನಿಸುತ್ತಿದೆ. ಇಂತಹ ಸಿದ್ದರಾಮಯ್ಯನವರನ್ನು ರಾಷ್ಟ್ರೀಯ ಲೀಡರ್ ಮಾಡಲು ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಸ್ಥಿತಿ ಏನಾಯಿತು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಈಶ್ವರಪ್ಪ ಪೆದ್ದ. ಸಂವಿಧಾನ ಗೊತ್ತಿಲ್ಲ ಅಂತಾರೆ. ನಿಮಗೆ ಕಾನೂನು ಗೊತ್ತ ಸಿದ್ದರಾಮಯ್ಯನವರೇ..? ನಾನು ಏಕವಚನದಲ್ಲಿ ಏ ಸಿದ್ದರಾಮಯ್ಯ ಎಂದು ಮಾತನಾಡಬಹುದು. ಆದರೆ, ಅದು ನಮ್ಮ ಪಕ್ಷದ ಸಂಸ್ಕøತಿ ಅಲ್ಲ. ಮತ್ತೇನಾದರೂ ನನ್ನ ಬಗ್ಗೆ ಏಕವಚನ ಬಳಸಿದರೆ ನಾನು ಅವರಿಗೆ ಕೆಟ್ಟ ಪದ ಬಳಸಬೇಕಾಗುತ್ತದೆ ಎಂದರಲ್ಲದೆ ಸಿದ್ದರಾಮಯ್ಯ ಅವರನ್ನು ಪೆದ್ದರಾಮಯ್ಯ ಅನ್ನಬೇಕೊ, ದಡ್ಡರಾಮಯ್ಯ ಅನ್ನಬೇಕೋ ಗೊತ್ತಾಗುತ್ತಿಲ್ಲ.
ಸಿದ್ದರಾಮಯ್ಯನೋರೇ ನೀವೇನು ಇಂಟರ್‍ನ್ಯಾಷನಲ್ ಲೀಡರ್ರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ನರೇಂದ್ರಮೋದಿ ಅವರನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಹಿಂದುಳಿದ ವರ್ಗಗಳ ಚಾಂಪಿಯನ್ ನೀವಲ್ಲ, ಮೋದಿಯವರು ಎಂದರು.

ತನಿಖೆ ನಡೆಸಿ: ಮುಖ್ಯಮಂತ್ರಿಗಳ ಪದಗ್ರಹಣ ಸಮಾರಂಭದಲ್ಲಿ ಗಣ್ಯರ ದುಬಾರಿ ಹೊಟೇಲ್ ಬಿಲ್ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅತಿಥಿಗಳ ಸತ್ಕಾರದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರೈತರ ಗದ್ದೆಯಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಭತ್ತ ನಾಟಿ ಮಾಡುತ್ತಿರುವುದು ಗಿಮಿಕ್. ಭತ್ತ ನಾಟಿ ಮಾಡುವ ಮೂಲಕ ಸಿಎಂ ಮಾಡೆಲ್ ನಾಟಕವಾಡುತ್ತಿದ್ದಾರೆ. ಮೊದಲು ಬಗರ್ ಹುಕುಂ ರೈತರಿಗೆ ಭೂಮಿ ಕೊಡಿ ಎಂದು ಒತ್ತಾಯಿಸಿದರು.
ರೇವಣ್ಣ ಎಲ್ಲಿರುತ್ತಾರೆ ಕಾದು ನೋಡಿ: ಬಿಜೆಪಿ ಶಾಸಕರು ಜೆಡಿಎಸ್ ಸೇರುತ್ತಾರಂತಲ್ಲ ಎಂಬ ವರದಿಗಾರರ ಪ್ರಶ್ನೆಗೆ ಇನ್ನೊಂದು ವರ್ಷದಲ್ಲಿ ಎಚ್.ಡಿ.ರೇವಣ್ಣ ಎಲ್ಲಿರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈಸೂರು, ತುಮಕೂರು, ಶಿವಮೊಗ್ಗದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ