ಬೆಂಗಳೂರು, ಆ.10-ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೀಗ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ. ಕಳೆದ ಬಾರಿ ಚುನಾವಣೆಯ ಸೋಲು ನನ್ನನ್ನು ಕಂಗೆಡಿಸಿದೆ. ನನಗೀಗ ಎಂಎಲ್ಎ, ಎಂಪಿ ಯಾವ ಚುನಾವಣೆ ಮೇಲೂ ಆಸಕ್ತಿ ಇಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ.
ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಜನ ಮನ್ನಣೆ ನೀಡಲಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಕೆಲಸವೊಂದೇ ಮಾನದಂಡ ಅಲ್ಲ. ಬೇರೆ ಬೇರೆ ಕಾರಣಗಳಿಂದಲೂ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಲಬುರ್ಗ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಹಾಲಪ್ಪ ಆಚಾರ್ ವಿರುದ್ಧ ಸೋಲನ್ನಪ್ಪಿದ್ದರು.
ಸೋತ ನಂತರ ರಾಜಕೀಯವಾಗಿ ವಿಮುಖರಾಗಿದ್ದರು. ಪ್ರಸ್ತುತ ಲೋಕಸಭೆ ಚುನಾವಣೆ ಎದುರಾಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸಲು ಒತ್ತಾಯ ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.