ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೆ ಸಂಪೂರ್ಣ ಸಹಕಾರ: ಸಿಎಂ

ಬೆಂಗಳೂರು, ಆ.10- ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಖಾಸಗಿ ಹೋಟೆಲ್‍ನಲ್ಲಿ ನಡೆದ ಧನ್ಯವಾದ ಕರ್ನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, ಟಿಬೆಟ್ ಮತ್ತು ಭಾರತದ ನಡುವೆ ಉತ್ತಮ ಬಾಂಧವ್ಯ ನಡೆದುಕೊಂಡು ಬಂದಿದೆ. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಟಿಬೆಟಿಯನ್ನರಿಗೆ ಆಶ್ರಯ ನೀಡಲಾಗಿತ್ತು. ಅಂದಿನಿಂದಲೂ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದೆ. ಮುಂದೆಯೂ ಟಿಬೆಟಿಯನ್ನರ ಅಭಿವೃದ್ಧಿಗೆ ಸಹಕಾರ ಮುಂದುವರೆಸಲಾಗುವುದು ಎಂದರು.
ಮೈಸೂರು, ಉತ್ತರ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಟಿಬೆಟಿಯನ್ನರಿಗೆ ಜಮೀನು ಮಂಜೂರು ಮಾಡಲಾಗಿತ್ತು. ಕರ್ನಾಟಕ ಮತ್ತು ಟಿಬೆಟ್ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟಿಬೆಟಿಯನ್ನರ ಧರ್ಮಗುರು ದಲೈಲಾಮ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೌದ್ಧಧರ್ಮದ ಪ್ರಮುಖ ಚಿನ್ಹೆಯಾದ ಧರ್ಮಚಕ್ರವನ್ನು ನೀಡಿ ಸನ್ಮಾನಿಸಲಾಯಿತು.
ಟಿಬೆಟಿಯನ್ನರಿಗೆ ಆಶ್ರಯ ನೀಡಿರುವ ಕರ್ನಾಟಕಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಧನ್ಯವಾದ ಕರ್ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ