
ಹೊಸದಿಲ್ಲಿ : ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ತೀವ್ರಗೊಂಡಿದ್ದು, ಇದರ ಪರಿಣಾಮ ಭಾರತಕ್ಕೆ ಅಗ್ಗದ ದರದಲ್ಲಿ ತೈಲ ಪಡೆಯಲು ಹಾದಿ ಸುಗಮವಾಗಿದೆ.
ಚೀನಾ ಇದುವರೆಗೆ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವ ಏಷ್ಯಾದ ರಾಷ್ಟ್ರವಾಗಿತ್ತು. ಆದರೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದ ತೈಲ ಕಂಪನಿ ಇದೀಗ ಅಮೆರಿಕದಿಂದ ತೈಲ ಆಮದನ್ನು ಸ್ಥಗಿತಗೊಳಿಸಿದೆ. ಅಮೆರಿಕದಿಂದ ಕಚ್ಚಾ ತೈಲ ಆಮದು ಮೇಲೆ ಆಮದು ಸುಂಕವನ್ನು ಹೇರಲು ಚೀನಾ ಸರಕಾರ ನಿರ್ಧರಿಸಿದೆ.
ಈ ನಡುವೆ ಭಾರತವು ಅಮೆರಿಕದಿಂದ 99.4 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದಿಗೆ ಆಗಸ್ಟ್ ತಿಂಗಳಿನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಅಮೆರಿಕದ ಜತೆ ತೈಲ ದರ ನಿಗದಿಗೆ ಸಂಬಂಧಿಸಿ ಚೌಕಾಶಿ ಮಾಡಲು ಭಾರತಕ್ಕೆ ಹಾದಿ ಸುಗಮವಾಗಿದೆ. ಹೀಗಾಗಿ ಕಡಿಮೆ ಬೆಲೆಗೆ ಅಮೆರಿಕದ ತೈಲ ಪಡೆಯಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾ ತನ್ನ ಬಾಗಿಲು ಬಂದ್ ಮಾಡುತ್ತಿರುವುದರಿಂದ ಈಗ ಏಷ್ಯಾದಲ್ಲಿ ದಕ್ಷಿಣ ಕೊರಿಯಾ ಹೊರತುಪಡಿಸಿದರೆ ಭಾರತವೇ ಅಮೆರಿಕಕ್ಕೆ ದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಹೀಗಾಗಿ ಚೌಕಾಶಿ ಮಾಡಲು ಬಲ ಬಂದಿದೆ ಎನ್ನಲಾಗುತ್ತಿದೆ. ತೈಲ ದರ ಅಗ್ಗವಾದಷ್ಟೂ ಭಾರತಕ್ಕೆ ಅನುಕೂಲಕರವಾಗಲಿದೆ.