ಭಾರತದಿಂದ ಬಡತನ ಕಿತ್ತೊಗೆಯಲು ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕು: ಎಸ್.ಇ.ಮಂಜುನಾಥ್ ಕರೆ

ಬೆಂಗಳೂರು, ಆ.9- ಭಾರತದಿಂದ ಬಡತನ ಕಿತ್ತೊಗೆಯಲು ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಸ್.ಇ.ಮಂಜುನಾಥ್ ಕರೆ ನೀಡಿದರು.
ನಗರದ ಪುರಭವನದಲ್ಲಿಂದು ಕ್ವಿಟ್‍ಇಂಡಿಯಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಾತ್ಮಗಾಂಧೀಜಿಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಚಳವಳಿ ಆರಂಭಿಸಿದರು. ಆ ಮೂಲಕ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂತು. ಆದರೆ, ಸ್ವಾತಂತ್ರ್ಯ ನಂತರ ಬಡತನ ದೇಶವನ್ನು ಕಾಡುತ್ತಿದೆ. ಈಗ ನಾವು ಬಡತನವೇ ಭಾರತ ಬಿಟ್ಟು ತೊಲಗು ಎಂಬ ಚಳವಳಿ ಹಮ್ಮಿಕೊಳ್ಳಬೇಕಿದೆ ಎಂದರು.
ಇಂದಿರಾಗಾಂಧಿ ಅವರು ಗರೀಬಿ ಹಠಾವೋ ಎಂಬ ಘೋಷಣೆ ಮೊಳಗಿಸಿ ಕೆಲಸ ಆರಂಭಿಸಿದ್ದರು. ಬಹುಶಃ ಇನ್ನು ಐದು ವರ್ಷ ಅವರು ಬದುಕಿದ್ದರೆ ಭಾರತದಿಂದ ಬಡತನ ತೊಲಗುತ್ತಿತ್ತು. ಅಷ್ಟರಲ್ಲಿ ಅವರ ಹತ್ಯೆಯಾಯಿತು. ಆ ಸಂದರ್ಭದಲ್ಲಿ ನಾನು ಬಡತನ ನಿರ್ಮೂಲನೆ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದನ್ನು ಮೆಚ್ಚಿಕೊಂಡಿದ್ದ ಇಂದಿರಾಗಾಂಧಿ ಅವರು, ದೆಹಲಿಗೆ ಬಂದು ಕೆಲಸ ಮಾಡುವಂತೆ ನನಗೆ ಆಹ್ವಾನ ನೀಡಿದ್ದರು. ಆದರೆ, ಅಷ್ಟರಲ್ಲಿಯೇ ಅವರ ಹತ್ಯೆ ಆಗಿ ಹೋಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ಮಧ್ಯಪ್ರದೇಶದ ದರ್ಬಾಂಗ್ ಎಂಬ ಒಂದು ಗ್ರಾಮವಿದೆ. ಕಡುಬಡತನ ಎಂದರೆ ಹೇಗಿರುತ್ತದೆ ಎಂಬುದನ್ನು ಆ ಗ್ರಾಮಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬೇಕು. ಜನ, ಜಾನುವಾರುಗಳೊಂದಿಗೆ ಒಂದೇ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಾರೆ. ನಾನು ಪ್ರಧಾನಿ ಅವರಿಗೆ ಪತ್ರ ಬರೆದು ದರ್ಬಾಂಗ್‍ಗೆ ಭೇಟಿ ನೀಡಿ. ಬಡತನ ಎಂದರೆ ಏನು ಎಂಬುದನ್ನು ಅರಿತುಕೊಳ್ಳಿ. ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದೆ. ಆದರೆ, ಅವರು ಅಲ್ಲಿಗೆ ಹೋದಂತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1885ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. ಕಾಂಗ್ರೆಸ್‍ನ ಹೋರಾಟದ ಫಲವಾಗಿ ದೇಶ ಸ್ವತಂತ್ರವಾಯಿತು. ಆನಂತರ ದೇಶದಲ್ಲಿದ್ದ 602 ಸಂಸ್ಥಾನಗಳನ್ನು ರಾಜರ ಆಳ್ವಿಕೆಯಿಂದ ಬಿಡಿಸಿ ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳಲು ಆಗಿನ ಗೃಹ ಸಚಿವ ಸರ್ದಾರ್‍ವಲ್ಲಭಬಾಯಿ ಪಟೇಲ್ ಶ್ರಮಿಸಿದ್ದರು. ಹೈದರಾಬಾದ್‍ನ ನಿಜಾಮ ಆಳ್ವಿಕೆ ಬಿಟ್ಟುಕೊಡಲು ನಿರಾಕರಿಸಿದಾಗ ವಲ್ಲಭ ಬಾಯಿ ಪಟೇಲ್ ಅವರು ಸೇನೆಯನ್ನು ಕಳುಹಿಸಿ ಪಾಠ ಕಲಿಸಿದರು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಸಚಿವ ಜಮೀರ್ ಅಹಮ್ಮದ್‍ಖಾನ್, ಮುಖಂಡರಾದ ಎಂ.ವಿ.ರಾಜಶೇಖರನ್, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ಸ್ವಾತಂತ್ರ ಹೋರಾಟಗಾರ ಮಂಜುನಾಥ್ ಅವರಿಂದ ಮಕ್ಕಳಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ದೇಶದಲ್ಲಿ ಬಡತನ, ಜಾತೀಯತೆ, ಕೋಮುವಾದ ತೊಲಗಲಿ ಎಂಬ ಆಶಯ ವ್ಯಕ್ತಪಡಿಸಲಾಯಿತು.
ಗಣ್ಯರ ಗೈರು:
ಕಾಂಗ್ರೆಸ್ ಪಾಲಿಗೆ ಕ್ವಿಟ್ ಇಂಡಿಯಾ ದಿನಾಚರಣೆ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದರೂ, ಇದರಲ್ಲಿ ಪ್ರಮುಖ ನಾಯಕರು ಗೈರು ಹಾಜರಾಗಿದ್ದರಿಂದ ಪಕ್ಷದೊಳಗಿನ ಗುಂಪುಗಾರಿಕೆಯನ್ನು ಎದ್ದು ತೋರುತ್ತಿತ್ತು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತುಮಕೂರಿಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಲಕೋಟೆಯ ಬಾದಾಮಿ ಕ್ಷೇತ್ರಕ್ಕೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಹೀಗಾಗಿ ಪುರಭವನದಲ್ಲಿ ನಡೆದ ಕಾರ್ಯಕ್ರಮ ಪ್ರಮುಖ ನಾಯಕರಿಲ್ಲದೆ ಕಾಳಹೀನವಾಗಿತ್ತು. ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರೂ ಮುಖಂಡರ ಗೈರು ಹಾಜರಿ ಮತ್ತು ನಿರಾಸಕ್ತಿ ಹಲವಾರು ಪ್ರಶ್ನೆಗಳನ್ನು ಮೂಡಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ