ಗೊಂದಲ ತಂದ ಪ್ರಾಂತ ರೈತ ಸಂಘದ ಪ್ರತಿಭಟನೆ

ಬೆಂಗಳೂರು, ಆ.9- ನಗರದ ಟೌನ್‍ಹಾಲ್ ಮುಂದೆ ಕಾಂಗ್ರೆಸ್ ಪಕ್ಷದ ಕ್ವಿಟ್‍ಇಂಡಿಯಾ ದಿನಾಚರಣೆ ಸಂದರ್ಭದಲ್ಲೇ ಕರ್ನಾಟಕ ಪ್ರಾಂತ ರೈತ ಸಂಘವು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಆಯೋಜಿಸಿದ್ದರಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು.
ಕರ್ನಾಟಕ ಪ್ರಾಂತ ರೈತ ಸಂಘ ಇಂದು ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು.
ಇನ್ನೊಂದೆಡೆ ಕಾಂಗ್ರೆಸ್ ಕ್ವಿಟ್‍ಇಂಡಿಯಾ ಚಳವಳಿ ಆಚರಣೆಗೆ ಟೌನ್‍ಹಾಲ್‍ನಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು. 10 ಗಂಟೆಗೆ ಇದ್ದ ಕಾರ್ಯಕ್ರಮ ಒಂದು ಗಂಟೆ ತಡವಾಗಿ ಆರಂಭವಾದ್ದರಿಂದ ನೂರಾರು ಕಾರ್ಯಕರ್ತರು ಟೌನ್‍ಹಾಲ್ ಮುಂದೆ ಜಮಾಯಿಸಿದ್ದರು.
ಕಾಂಗ್ರೆಸ್ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಕೂಡ ಟೌನ್‍ಹಾಲ್ ಮುಂದೆಯೇ ಜಮಾಯಿಸಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು. ಒಂದೆಡೆ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿಐಟಿಯುನ ಕೆಂಪು ಬಾವುಟಗಳು ಮತ್ತರ್ಧ ಭಾಗದಲ್ಲಿ ಕಾಂಗ್ರೆಸ್‍ನ ಕಾರ್ಯಕರ್ತರು ಮತ್ತು ಬಾವುಟಗಳು ರಾರಾಜಿಸುತ್ತಿದ್ದವು. ಇದರಿಂದಾಗಿ ದಾರಿಯಲ್ಲಿ ಹೋಗುವವರಿಗೆ ಗೊಂದಲ ಉಂಟಾಗಿತ್ತು.
ಕೇಂದ್ರ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿಸಬೇಕು. ರೈತರು ಸಾಗುವಳಿ ಮಾಡುತ್ತಿರುವ ಬಗರ್‍ಹುಕುಂ ಗೋಮಾಳ, ಅರಣ್ಯ ಭೂಮಿಗೆ ಹಕ್ಕುಪತ್ರ ನೀಡಬೇಕು. ಸರ್ಕಾರದ ವತಿಯಿಂದ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕು. ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಹಾಗೂ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ವಿಶೇಷ ಕೋರ್ಟ್ ಮೂಲಕ ಶಿಕ್ಷೆ ವಿಧಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು.
ದೇಶಾದ್ಯಂತ ಇದೇ ಬೇಡಿಕೆಗಳನ್ನು ಆಧರಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಶಾಖೆಗಳ ಮುಖಂಡರು ಹಾಗೂ ಕಾರ್ಯಕರ್ತರು ಟೌನ್‍ಹಾಲ್ ಮುಂದೆ ಬೆಳಗ್ಗೆ 10.30ಕ್ಕೆ ಪ್ರತಿಭಟನಾ ಧರಣಿ ನಡೆಸಿದರು. ಮುಖಂಡರಾದ ವೆಂಕಟಾಚಲಯ್ಯ, ನರಸಿಂಹಮೂರ್ತಿ, ಬಾಲರಾಜ್, ವನಜಾ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ