ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಜಯಗಳಿಸಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಕನ್ನಡಿಗ ಬಿ.ಕೆ ಹರಿಪ್ರಸಾದ್ ಸೋತಿದ್ದಾರೆ.
ಪಿ.ಜೆ ಕುರಿಯನ್ ಅವರ ನಿವೃತ್ತಿ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ ಹರಿವಂಶ್ ನಾರಾಯಣ್ ಅವರಿಗೆ 125 ಮತಗಳು ಬಿದ್ದರೆ ಬಿ.ಕೆ ಹರಿಪ್ರಸಾದ್ 105 ಮತಗಳನ್ನು ಗಳಿಸಿದರು.
ಲೋಕಸಭಾ ಚುನಾವಣೆಗೂ ಮೊದಲು ಪ್ರತಿಷ್ಠೆಯ ಕಣದಂತಿದ್ದ ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‍ಡಿಎ ಮೇಲುಗೈ ಸಾಧಿಸಿದೆ. ಕೇವಲ 20 ಮತಗಳ ಅಂತರದಿಂದ ಗೆದ್ದ ನೂತನ ಉಪಸಭಾಪತಿ ಹರಿವಂಶ್‍ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ರು. ಫಲಿತಾಂಶದಿಂದ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗಿದೆ.
ರಾಜ್ಯಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಅದರ ಎನ್‍ಡಿಎಗೆ ಬಹುಮತವಿರಲಿಲ್ಲ. ಎನ್‍ಡಿಎಗೆ ಬಹುಮತ ಇಲ್ಲದ ಕಾರಣ ವಿರೋಧ ಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿ ಹರಿಪ್ರಸಾದ್ ಅವರನ್ನು ಬೆಂಬಲಿಸಿತ್ತು.
ಶಿವಸೇನೆ, ಅಕಾಲಿ ದಳ, ಬಿಜೆಡಿ, ಎಐಎಡಿಎಂಕೆ, ಟಿಆರ್ ಎಸ್ ಎನ್‍ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಟಿಎಂಸಿ, ಡಿಎಂಕೆ, ಎಡ ಪಕ್ಷಗಳು, ಎಸ್‍ಪಿ, ಬಿಎಸ್‍ಪಿ, ಎನ್‍ಸಿಪಿ, ಟಿಡಿಪಿ ಬೆಂಬಲಿಸಿತ್ತು. ವೈಎಸ್‍ಆರ್ ಪಿ, ಪಿಡಿಪಿ ಮತ್ತು ಆಪ್ ಸದಸ್ಯರು ಚುನಾವಣೆಗೆ ಗೈರು ಹಾಜರಿ ಹಾಕಿದ್ದರು.