ಬೆಂಗಳೂರು, ಆ.9- ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷ ಆ.11ರೊಳಗೆ ತನ್ನ ಸ್ಪಷ್ಟ ನಿಲುವು ತಿಳಿಸದಿದ್ದರೆ 13ರಂದು ಬೀದರ್ನಲ್ಲಿ ನಡೆಯುವ ಜನಧ್ವನಿ ಕಾರ್ಯಕ್ರಮದಲ್ಲಿ ರಾಹುಲ್ಗಾಂಧಿ ಭಾಷಣಕ್ಕೆ ಅಡ್ಡಿಪಡಿಸುವುದಾಗಿ ಕರ್ನಾಟಕ ನವಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಅನಂತರಾಯಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ನಿರಂತರವಾಗಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸುತ್ತಿದೆ. ಇದರ ಬಗ್ಗೆ ನಮ್ಮ ಸಂಘಟನೆಗಳು ಅನೇಕ ಪ್ರತಿಭಟನೆ ನಡೆಸಿದರೂ ಸಹ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗ, ಲಿಂಗಾಯಿತರು, ಹಿಂದುಳಿದವರಿಗೆ ಅನೇಕ ಬಾರಿ ಸಿಎಂ ಸ್ಥಾನ ನೀಡಿರುವ ಈ ಪಕ್ಷ ದಲಿತರಲ್ಲಿ ಅರ್ಹ ನಾಯಕರಿದ್ದರೂ ಪದೇ ಪದೇ ಕಡೆಗಣಿಸುತ್ತಿದೆ. ಅದಕ್ಕಾಗಿ ನಮಗೆ ಆಗಿರುವ ಅನ್ಯಾಯದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರ ಗಮನ ಸೆಳೆಯುವುದಕ್ಕಾಗಿ ಬೀದರ್ನಲ್ಲಿ ಜನಧ್ವನಿ ಕಾರ್ಯಕ್ರಮದಲ್ಲಿ ರಾಹುಲ್ಗಾಂಧಿ ಅವರು ಭಾಷಣ ಮಾಡುವಾಗ ಒಂದು ಸಾವಿರ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಇದೇ 28ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ದಲಿತರ ರಾಜ್ಯವ್ಯಾಪಿ ಆಂದೋಲನಕ್ಕೆ ಚಾಲನೆ ನೀಡಿ, ಸೆಪ್ಟೆಂಬರ್ ಮೊದಲ ವಾರ ಮೈಸೂರಿನಿಂದ ಪ್ರಾರಂಭಿಸಿ ಸ್ಥಳೀಯ ದಲಿತ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನಡೆಸಲಿದ್ದೇವೆ ಎಂದು ತಿಳಿಸಿದರು.
ಒಂದು ವೇಳೆ ಆಗಸ್ಟ್ 11ರ ಒಳಗೆ ದಲಿತರನ್ನು ಸಿಎಂ ಮಾಡುವ ಬಗ್ಗೆ ಕಾಂಗ್ರೆಸ್ ವರಿಷ್ಠರು ತಮ್ಮ ನಿಲುವನ್ನು ತಿಳಿಸಿದರೆ ನಾವು ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಅನಂತರಾಯಪ್ಪ ತಿಳಿಸಿದರು.