ನೀರಿಲ್ಲದೆ ಬಣಗುಡುತ್ತಿವೆ ರಾಜ್ಯದ 1142 ನೀರಾವರಿ ಕೆರೆಗಳು

 

ಬೆಂಗಳೂರು,ಆ.9-ರಾಜ್ಯದಲ್ಲಿ ಭಾರೀ ಮಳೆಯಿಂದ ಅತಿವೃಷ್ಟಿ ಉಂಟಾಗಿರುವುದು ಒಂದೆಡೆಯಾದರೆ ಮಳೆ ಕೊರತೆಯಿಂದ ಬರದ ಛಾಯೆ ಮತ್ತೊಂದೆಡೆ ಕಾಡುತ್ತಿದೆ. ಈ ನಡುವೆ ರಾಜ್ಯದ 1142 ಸಣ್ಣ ನೀರಾವರಿ ಕೆರೆಗಳು ನೀರು ಬಾರದೆ ಬಣಗುಡುತ್ತಿವೆ.
ಈ ಬಾರಿ ಮುಂಗಾರು ಉತ್ತಮವಾಗಿದ್ದರಿಂದ ಕೆಆರ್‍ಎಸ್ , ಆಲಮಟ್ಟಿ, ತುಂಗಭದ್ರ ಸೇರಿದಂತೆ ಪ್ರಮುಖ ಜಲಾಶಯಗಳು ಭರ್ತಿಯಾಗಿ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಪ್ರಮಾಣಕ್ಕಿಂತ ಮಳೆ ಕಡಿಮೆಯಾಗಿ ಬಿತ್ತನೆ ಕಾರ್ಯವು ಕುಂಠಿತವಾಗಿದೆ.
ಭಾರೀ ಮಲೆನಾಡು , ಕೊಡಗು ಹಾಗೂ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದ 3607 ಸಣ್ಣ ಕೆರೆಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು ಕೇವಲ 160 ಕೆರೆಗಳು ಮಾತ್ರ.
ಶೇ.18ರಷ್ಟು ಮಾತ್ರ ಸಣ್ಣ ನೀರಾವರಿ ಕೆರೆಗಳಿಗೆ ನೀರು ಬಂದಿದೆ. ಶೇ.30ರಷ್ಟು ಮಾತ್ರ ನೀರು ಬಂದಿರುವ ಕೆರೆಗಳ ಸಂಖ್ಯೆ 1338 ಇದೆ. ಅರ್ಧದಷ್ಟು ಭರ್ತಿಯಾಗಿರುವ ಕೆರೆಗಳು 457 ಹಾಗೂ 510 ಕೆರೆಗಳು ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿವೆ.
ಭರ್ತಿಯಾಗಿರುವ ಕೆರೆಗಳ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 46, ಚಿಕ್ಕಮಗಳೂರು ಜಿಲ್ಲೆಯಲ್ಲಿ 29, ಕೊಡಗು ಜಿಲ್ಲೆಯಲ್ಲಿ 16, ಹಾಸನದಲ್ಲಿ ಎಂಟು ಕೆರೆಗಳು ಹಾಗೂ ಉಡುಪಿಯಲ್ಲಿ ನಾಲ್ಕು ಕೆರೆಗಳು ಸೇರಿವೆ.
ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ 1629 ಕೆರೆಗಳಿದ್ದು, 43 ಕೆರೆಗಳು ಮಾತ್ರ ಪೂರ್ಣವಾಗಿ ಭರ್ತಿಯಾಗಿವೆ. ಬೆಳಗಾವಿಯಲ್ಲಿ 17, ವಿಜಯಪುರದಲ್ಲಿ 11, ಹಾವೇರಿಯಲ್ಲಿ 5, ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಕೆರೆಗಳು ಮಾತ್ರ ಭರ್ತಿಯಾಗಿವೆ.
ರಾಜ್ಯದ ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ 1978 ಸಣ್ಣ ನೀರಾವರಿ ಜಲಾಶಯಗಳಿದ್ದು, 117 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ.
ಸತತ ಬರಕ್ಕೆ ತುತ್ತಾಗುತ್ತಿರುವ ರಾಜ್ಯದಲ್ಲಿ ಹಲವು ವರ್ಷಗಳಿಂದ ಸಣ್ಣ ನೀರಾವರಿ ಕೆರಗಳು ಭರ್ತಿಯಾಗದೆ ಅಂತರ್ಜಲ ಕೂಡ ತೀವ್ರ ಕುಸಿತ ಕಂಡುಬಂದಿದೆ.
ಬಹಳಷ್ಟು ಸಣ್ಣ ಕೆರೆಗಳ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಕೂಡ ನೀರಿನ ಅಭಾವವನ್ನು ನಿರಂತರವಾಗಿ ಎದುರಿಸುತ್ತಾ ಬಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ