ಹೊಸದಿಲ್ಲಿ : ನೋಟು ಅಮಾನ್ಯತೆ ಹಾಗೂ ಜಿಎಸ್‌ಟಿ ಜಾರಿಯ ಆರಂಭಿಕ ಹಂತದ ಪರಿಣಾಮಗಳ ಹೊರತಾಗಿಯೂ ಭಾರತದ ಆರ್ಥಿಕ ಬೆಳವಣಿಗೆ (ಜಿಡಿಪಿ) 2018ರಲ್ಲಿ ಶೇ.7.3ಕ್ಕೆ ಏರಿಕೆಯಾಗಲಿದೆ; 2019ರಲ್ಲಿ ಶೇ.7.5ಕ್ಕೆ ವೃದ್ಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ತಿಳಿಸಿದೆ.
ಸ್ವಾರಸ್ಯವೇನೆಂದರೆ ಕಳೆದ 4 ವರ್ಷಗಳಲ್ಲಿ ಭಾರತೀಯರ ತಲಾ ಆದಾಯವು ಸುಮಾರು 80,000 ರೂ.ಗೆ ಏರಿಕೆಯಾಗಿದೆ. 2011-12 ಮತ್ತು 2014-15ರಲ್ಲಿ ದೇಶದ ತಲಾ ಆದಾಯ 67,594 ರೂ.ಗಳಿದ್ದರೆ, 2014-15 ಮತ್ತು 2017-18ರ ಅವಧಿಯಲ್ಲಿ 79,882 ರೂ.ಗೆ ವೃದ್ಧಿಸಿದೆ ಎಂದು ಲೋಕಸಭೆಯಲ್ಲಿ ಅಂಕಿ ಅಂಶಗಳ ಸಹಾಯಕ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ. ಭಾರತದ ಒಟ್ಟು ಆದಾಯವನ್ನು ಜನಸಂಖ್ಯೆಯಿಂದ ಭಾಗಿಸಿದಾಗ ತಲಾ ಆದಾಯ ಸಿಗುತ್ತದೆ.
ಏಪ್ರಿಲ್‌ನ ಮುನ್ನೋಟಕ್ಕೆ ಹೋಲಿಸಿದರೆ 2018 ಮತ್ತು 2019ರ ಅಂದಾಜಿನಲ್ಲಿ ಅನುಕ್ರಮವಾಗಿ 0.1 ಮತ್ತು 0.3 ಅಂಕ ಇಳಿಕೆಯಾಗಿದ್ದರೂ, ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ಚುರುಕಾಗಿದೆ.
ತೈಲ ದರ ಏರಿಕೆ ಹಾಗೂ ದೇಶೀಯ ಬೇಡಿಕೆಗಳ ಇಳಿಕೆಯ ನಕಾರಾತ್ಮಕ ಪರಿಣಾಮ ಜಿಡಿಪಿಯ ಮೇಲೆ ಆಗಿದೆ. ಹಣದುಬ್ಬರ ನಿಯಂತ್ರಣದ ಸಲುವಾಗಿ ಆರ್‌ಬಿಐ ಆರ್ಥಿಕ ನೀತಿಯನ್ನೂ ಬಿಗಿಗೊಳಿಸಿದೆ ಎಂದು ಐಎಂಎಫ್ ವರದಿ ತಿಳಿಸಿದೆ. ಚೀನಾದ ಜಿಡಿಪಿ ಬೆಳವಣಿಗೆಯು 2018ರಲ್ಲಿ ಶೇ.6.6 ಹಾಗೂ 2019ರಲ್ಲಿ ಶೇ.6.4ಕ್ಕೆ ಇಳಿಕೆಯಾಗಲಿದೆ. ಅಮೆರಿಕದ ಆರ್ಥಿಕ ಬೆಳವಣಿಗೆ 2018ರಲ್ಲಿ ಶೇ.2.9 ಮತ್ತು 2019ರಲ್ಲಿ ಶೇ.2.7ರಷ್ಟು ಇರಬಹುದು ಎಂದು ಅಂದಾಜಿಸಿದೆ.
ಭಾರತದ ಬಗ್ಗೆ ಐಎಂಎಫ್ ಹೇಳಿದ್ದೇನು?
1. 2018-19ರಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಹಾಗೂ 2019-20ರಲ್ಲಿ ಶೇ.7.5ಕ್ಕೆ ವೃದ್ಧಿಸಲಿದೆ.
2. ಈ ವರ್ಷ ಒಟ್ಟಾರೆ ಹೂಡಿಕೆಯು ಜಿಡಿಪಿಯ ಶೇ.30.6ರಿಂದ ಶೇ.32.2ಕ್ಕೆ ಏರಿಕೆಯಾಗಲಿದೆ.
3. ರಫ್ತು ಈ ವರ್ಷ ಶೇ.13.2ಕ್ಕೆ ಹೆಚ್ಚಲಿದೆ. 2011-12ರ ನಂತರ ಇದು ಗರಿಷ್ಠ ಬೆಳವಣಿಗೆ.
4.ಗ್ರಾಹಕ ದರ ಆಧಾರಿತ ಹಣದುಬ್ಬರ ಶೇ.5.2ಕ್ಕೆ ಏರಿಕೆ ಸಂಭವ.
5. ಆರ್ಥಿಕ ಬೆಳವಣಿಗೆಯ ಪರಿಣಾಮ ಹಣದ ಪೂರೈಕೆಯಲ್ಲಿ ಶೇ.11.4ರಷ್ಟು ಹೆಚ್ಚಳ ನಿರೀಕ್ಷೆ.
6. ಜಿಡಿಪಿಯ ಶೇ.2.6 ಉಳಿತಾಯ ದರ. ಕಳೆದ ವರ್ಷಕ್ಕಿಂತ ಶೇ.1.9 ಏರಿಕೆ.
7. ಆಮದು ಇಳಿಕೆ ನಿರೀಕ್ಷೆ
8. ವಿದೇಶಿ ನೇರ ಬಂಡವಾಳ ಹೂಡಿಕೆ ಏರಿಕೆ ಸಂಭವ.