ಬೆಂಗಳೂರು, ಆ.9- ರಾಜ್ಯದಲ್ಲಿ ಜಿಎಸ್ಟಿ ಜಾರಿ ಬಳಿಕ ತೆರಿಗೆ ವ್ಯಾಪ್ತಿಗೆ 2 ಲಕ್ಷ ವರ್ತಕರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್.ಶ್ರೀಕರ್ ವಿಷಾದಿಸಿದ್ದಾರೆ.
ಜಿಎಸ್ಟಿ ಒಂದು ವರ್ಷದ ಬಳಿಕ- ಕುರಿತು ಕಾಸಿಯಾ ಹಮ್ಮಿಕಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವ್ಯಾಟ್ ಬದಲು ಜಿಎಸ್ಟಿ ಜಾರಿಯಾದ ನಂತರ ದೇಶಾದ್ಯಂತ ಗಮನಿಸಿದರೆ ಜಿಎಸ್ಟಿ ಸಂಗ್ರಹ ಉತ್ತಮವಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ತೆರಿಗೆ ಹೆಚ್ಚಳ ಕಂಡುಬಂದಿಲ್ಲ. ಜಿಎಸ್ಟಿ ನಂತರ ಎರಡು ಲಕ್ಷ ವರ್ತಕರು ಹೆಚ್ಚುವರಿಯಾಗಿ ಈ ವ್ಯಾಪ್ತಿಗೆ ಒಳಗೊಂಡು ಒಟ್ಟಾರೆ 7 ಲಕ್ಷ ವರ್ತಕರು ಜಿಎಸ್ಟಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೂ ಸಹ ತೆರಿಗೆ ಸಂಗ್ರಹಣೆಯಲ್ಲಿ ಹಿನ್ನಡೆಯಾಗಿದೆ.
ಸಮಯಕ್ಕೆ ಸರಿಯಾಗಿ ಎಲ್ಲರೂ ತೆರಿಗೆ ಹಾಗೂ ರಿಟರ್ನ್ ಸಲ್ಲಿಸಿದರೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ಏಕಾಏಕಿ ಎಲ್ಲರೂ ರಿಟರ್ನ್ ಸಲ್ಲಿಕೆಗೆ ಮುಂದಾದಾಗ ಅಂತರ್ಜಾಲದ ಸರ್ವರ್ ದುರ್ಬಲವಾಗಿ ಸ್ಥಗಿತಗೊಳ್ಳುತ್ತದೆ. ಅದೇ ರೀತಿಯಲ್ಲಿ ಕಳೆದ ಜು.18, 19, 20ರಂದು ಆಗಿದೆ. ವರ್ತಕರಿಗಿದ್ದ ಸಮಯಾವಕಾಶದಲ್ಲಿ ಮೊದಲೇ ರಿಟರ್ನ್ ಸಲ್ಲಿಸದೆ ಕಡೆ ದಿನಗಳಲ್ಲಿ 70 ಲಕ್ಷ ವರ್ತಕರು ಒಟ್ಟಿಗೇ ರಿಟರ್ನ್ ಸಲ್ಲಿಸಿದ್ದರು. ಹಾಗಾಗಿ ಸಮಸ್ಯೆ ಎದುರಾಗಿತ್ತು ಎಂದು ವಿವರಿಸಿದರು.
ದೇಶದಲ್ಲಿ 1 ಲಕ್ಷ ಡೀಲರ್ಗಳು ಜಿಎಸ್ಟಿ ರಿಟರ್ನ್ಅನ್ನು ಆನ್ಲೈನ್ ಮೂಲಕ ಸಲ್ಲಿಸುತ್ತಿರುವುದು ಸರ್ಕಾರದ ಯಶಸ್ಸು ಎಂದೇ ಹೇಳಬಹುದಾಗಿದೆ. ಜಿಎಸ್ಟಿ ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಾಗಿದ್ದು, ಇಷ್ಟೊಂದು ಜನ ಆನ್ಲೈನ್ ಮೂಲಕವೇ ಇದರ ಬಳಕೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಸರಿಯಾದ ಸಮಯಕ್ಕೆ ಜಿಎಸ್ಟಿಯಡಿ ನೋಂದಾಯಿಸಿಕೊಂಡ ವರ್ತಕರು ತೆರಿಗೆ ಪಾವತಿಸದ್ದನ್ನು ಗಮನಿಸಿ ಅವರಿಗೆ ದಂಡ ಹಾಗೂ ಬಡ್ಡಿ ವಿಧಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಇದನ್ನು ರದ್ದುಮಾಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಆ.8ರಿಂದಲೇ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಉದ್ಯಮಿಗಳು ವಾಣಿಜ್ಯ ತೆರಿಗೆ ಇಲಾಖೆಯ ವೆಬ್ಸೈಟ್ ನೋಡಿ ಅಫೀಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ ಮಾತನಾಡಿ, ಸಣ್ಣ ಉದ್ಯಮಗಳಿಗೆ ಜಿಎಸ್ಟಿ ಹೊಡೆತ ಬಿದ್ದಿದೆ. ಈಗಾಗಲೇ ವಸ್ತ್ರೋದ್ಯಮದಲ್ಲಿ ಜಿಎಸ್ಟಿ ಪ್ರಮಾಣ ಕಡಿಮೆ ಮಾಡಿರುವಂತೆ ಸಣ್ಣ ಉದ್ಯಮಗಳಲ್ಲೂ ತೆರಿಗೆ ಕಡಿವೆÅ ಮಾಡಬೇಕೆಂದು ಮನವಿ ಮಾಡಿದರು.
ಕಾಸಿಯಾ ಮಾಜಿ ಅಧ್ಯಕ್ಷ ಹನುಮಂತೇಗೌಡ, ತೆರಿಗೆ ತಜ್ಞ ಎಚ್.ಆರ್.ಪ್ರಭಾಕರ್, ಅಡ್ವೊಕೇಟ್ ಸಿದ್ಧಾರ್ಥ್ ಭಟ್ ಮತ್ತಿತರರು ಹಾಜರಿದ್ದರು.