ಗಾಂಧೀಜಿಯವರ ಸರಳ ಜೀವನ, ಅಹಿಂಸಾ ತತ್ವ ಬದುಕಿನಲ್ಲಿ ಅಳವಡಿಸಿಕೊಳ್ಳಿ

ಬೆಂಗಳೂರು, ಆ.9-ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಮೇಯರ್ ಪುಟ್ಟೇಗೌಡ ಕರೆ ನೀಡಿದರು.
ಜೆ.ಪಿ.ಭವನದಲ್ಲಿಂದು ಬೆಂಗಳೂರು ನಗರ ಜೆಡಿಎಸ್ ಘಟಕ ಆಯೋಜಿಸಿದ್ದ ಭಾರತ ಬಿಟ್ಟು ತೊಲಗಿ ಚಳವಳಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿಯವರ ಸರಳ ಜೀವನ, ಅಹಿಂಸಾ ತತ್ವಗಳನ್ನು ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ವಿಶ್ವದ 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳಿವೆ. ಇಷ್ಟು ಪ್ರಮಾಣದಲ್ಲಿ ಬೇರೆ ಯಾವ ರಾಜರ ಪ್ರತಿಮೆಗಳು ಇಲ್ಲ ಎಂದು ಹೇಳಿದರು.
ಮಾಜಿ ಶಾಸಕ ರಾಜಣ್ಣ ಮಾತನಾಡಿ, ನೀರು, ಗಾಳಿ, ಭೂಮಿ ಸೇರಿದಂತೆ ಎಲ್ಲವೂ ಮಲಿನವಾಗುತ್ತಿವೆ. ಈ ರಾಸಾಯನಿಕ ವಸ್ತುಗಳಿಂದ ಭೂಮಿಯು ಬರಡಾಗುತ್ತಿದೆ. ಪರಿಸರ ಸಂರಕ್ಷಣೆ ಕಡೆ ಪ್ರತಿಯೊಬ್ಬರೂ ಗಮನಹರಿಸಬೇಕಾಗಿದೆ. ಮಹಾತ್ಮ ಗಾಂಧೀಜಿಯವರು ಬ್ರಿಟಿಷರನ್ನು ಭಾರತದಿಂದ ಓಡಿಸಲು ಭಾರತ ಬಿಟ್ಟು ತೊಲಗಿ ಚಳವಳಿಗೆ ಕರೆ ನೀಡಿದ್ದರು. ಸ್ವಾತಂತ್ರ್ಯಕ್ಕಾಗಿ ಹಲವು ಮಂದಿ ಸೆರೆವಾಸ ಅನುಭವಿಸಿದ್ದಾರೆ. ಇದನ್ನು ಅರಿತು ಗಾಂಧೀಜಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೆಜಿಎಫ್ ಚಿನ್ನದ ಗಣಿಯಿಂದ 720 ಟನ್ ಬಂಗಾರವನ್ನು ಬ್ರಿಟಿಷರು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ,ಗಾಂಧೀಜಿಯವರ ಸರಳ ಜೀವನ, ಅಹಿಂಸಾ ತತ್ವಗಳನ್ನು ಸಾಧ್ಯವಾದ ಮಟ್ಟಿಗೆ ಬದುಕಿನಲ್ಲಿ ಅನುಕರಣೆ ಮಾಡಬೇಕೆಂದು ಕರೆ ನೀಡಿದರು.
ಜೆಡಿಎಸ್ ಬೆಂಗಳೂರು ನಗರ ಘಟಕದ ಕಾರ್ಯಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಮಹಿಳಾ ವಿಭಾಗದ ಅಧ್ಯಕ್ಷರಾದ ಆಶಾದೇವಿ, ಕಾರ್ಯಾಧ್ಯಕ್ಷರಾದ ಶಶಿಕಲಾ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ