ಬೆಂಗಳೂರಿನ ಎರಡು ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು

ಬೆಂಗಳೂರು, ಆ.9-ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ರಾಮನಗರದಲ್ಲಿ ಬಂಧನಕ್ಕೊಳಗಾಗಿರುವ ಉಗ್ರ ಮುಹಮ್ಮದ್ ಜಹೀರುಲ್ ಇಸ್ಲಾಮ್ ಅಲಿಯಾಸ್ ಮುನೀರ್ ಬೆಂಗಳೂರಿನ ಎರಡು ಜನನಿಬಿಡ ಪ್ರದೇಶಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
2018ರ ಮೇ ತಿಂಗಳಲ್ಲಿ ಬೆಂಗಳೂರಿಗೆ ಬಂದಿರುವ ಈತ ಕೆ.ಆರ್.ಪುರಂ ಮತ್ತು ವೈಟ್‍ಫೀಲ್ಡ್ ನಲ್ಲಿ ವಾಸವಾಗಿದ್ದ. ಬಟ್ಟೆ ವ್ಯಾಪಾರದ ನೆಪದಲ್ಲಿ ನಗರದ ಹಲವು ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಪಡೆದಿದ್ದ ಈತ ಬಳಿಕ ರಾಮನಗರಕ್ಕೆ ಸ್ಥಳಾಂತರಗೊಂಡಿದ್ದ ಎಂದು ತಿಳಿದುಬಂದಿದೆ.
ಉಗ್ರ ಜಹೀರುಲ್ ಇಸ್ಲಾಮ್ ಡಿಸೆಂಬರ್ ತಿಂಗಳಲ್ಲಿ ನಗರದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ. ಆದರೆ ಅದಕ್ಕೂ ಮೊದಲೇ ಆತ ಎನ್‍ಐಎ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬುದ್ರ್ವಾನ್ ಬಾಂಬ್ ಸ್ಫೋಟ ಮತ್ತು ಭೋದ್‍ಗಯಾ ಸ್ಫೋಟದ ಪ್ರಮುಖ ಸೂತ್ರಧಾರಿಯೂ ಆಗಿರುವ ಈತನ ಬಂಧನಕ್ಕೆ ಎನ್‍ಐಎ ಅಧಿಕಾರಿಗಳು ಬಲೆ ಬೀಸಿದ್ದರು. ರಾಮನಗರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎನ್‍ಐಎ ಅಧಿಕಾರಿಗಳು ಆ.7ರಂದು ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ಸ್ಫೋಟಕ್ಕೆ ಸಂಚು ರೂಪಿಸಿದ್ದಾನೆ ಎಂದು ತಿಳಿದುಬಂದಿದೆ.
ಮುನೀರ್‍ನ ಸಹಚರರಿಗಾಗಿ ಎನ್‍ಐಎ ಅಧಿಕಾರಿಗಳು ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ