ಆದಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಒತ್ತಾಯ

 

ಬೆಂಗಳೂರು, ಆ.9- ಆದಿವಾಸಿಗಳ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಬೇಕು. ಆದಿವಾಸಿಗಳು ನೆಲೆಸಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ವಿಶ್ವ ಆದಿವಾಸಿ ರಕ್ಷಣಾ ಪರಿಷತ್‍ನ ಅಧ್ಯಕ್ಷ ಎಂ.ಕೃಷ್ಣಪ್ಪ ಒತ್ತಾಯಿಸಿದ್ದಾರೆ.
ಪರಿಷತ್‍ನ ವತಿಯಿಂದ ನಗರದಲ್ಲಿಂದು ಏರ್ಪಡಿಸಿದ್ದ 24ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸರ್ಕಾರ ಬೇರೆ ಬೇರೆ ಜಯಂತಿಗಳನ್ನು ಆಚರಿಸುತ್ತಿದೆ. ಅದೇ ರೀತಿ ಆದಿವಾಸಿಗಳ ದಿನಾಚರಣೆಯನ್ನು ಸರ್ಕಾರವೇ ಆಚರಿಸಬೇಕು ಎಂದು ಒತ್ತಾಯಿಸಿದರು.
ಸಾವಿರಾರು ವರ್ಷಗಳಿಂದ ಆದಿವಾಸಿಗಳು ಸಂಕಷ್ಟಮಯ ಜೀವನ ನಡೆಸುತ್ತಿದ್ದಾರೆ. ಈ ಸಮುದಾಯದ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ. ಈ ಸರ್ಕಾರವಾದರೂ ಆದಿವಾಸಿಗಳ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ವಾಸಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಯನ್ನು ರೂಪಿಸಿದೆ. ಆದರೆ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಇದರಿಂದ ಅರಣ್ಯ ಅಧಿಕಾರಿಗಳು ನಿರಂತರವಾಗಿ ಆದಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ ಅವರು, ಆದಿವಾಸಿಗಳ ಪ್ರದೇಶವನ್ನು ಟೆಂಟ್ ಮುಕ್ತ ಪ್ರದೇಶವಾಗಿ ಮಾಡಬೇಕು, ಈ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸಿ, ಶಾಲೆ, ಆಸ್ಪತ್ರೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಕಾಗಿನೆಲೆ ಮಹಾಸಂಸ್ಥಾನದ ಕಲಬುರಗಿ ವಿಭಾಗದ ಸಿದ್ದರಾಮಾನಂದ ಸ್ವಾಮೀಜಿ, ಶಾಸಕ ಪುಟ್ಟರಂಗ ಶೆಟ್ಟಿ, ಸಿ.ಎಸ್. ದ್ವಾರಕಾನಾಥ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಅಲೆಮಾರಿ ಮತ್ತು ಆದಿವಾಸಿ ಜನರಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ