ಬೆಂಗಳೂರು,ಆ.9- ಮೈಸೂರು ಮಾದರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೂ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಜಾರಿಗೆ ಬರಲಿದೆ.
ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಗಮನದಲ್ಲಿಟ್ಟುಕೊಂಡು ಸೈಕಲ್ ಯೋಜನೆ ಜಾರಿಗೆ ತರಲು ಪಾಲಿಕೆ ನಿರ್ಧರಿಸಿದೆ. ಈ ಯೋಜನೆ ಜಾರಿಗೆ ಬಂದರೆ ಸುಮಾರು ಎಂಟು ಸಾವಿರ ಸೈಕಲ್ಗಳು ಸದ್ಯದಲ್ಲೇ ರಸ್ತೆಗಿಳಿಯಲಿವೆ.
ಬಿಬಿಎಂಪಿ ಸೈಕಲ್ ಟ್ರ್ಯಾಕ್ ಮಾಡಿ ನಿಲುಗಡೆ ವ್ಯವಸ್ಥೆ ಮಾಡಲಿದೆ. ಈಗಾಗಲೇ ಕಾಮರಾಜ ರಸ್ತೆಯಲ್ಲಿ ಸೈಕಲ್ ಟ್ರಾಕ್ ಮಾಡಲಾಗಿದೆ. ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ವಾಣಿಜ್ಯ ಭಾಗಗಳಲ್ಲಿ ಸೈಕಲ್ ಟ್ರ್ಯಾಕ್ಗಳನ್ನು ಬಿಬಿಎಂಪಿ ನಿರ್ಮಿಸಲಿದೆ.
ಈ ಮೊದಲು ಆರು ಸಾವಿರ ಸೈಕಲ್ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಸೈಕಲ್ ನಿರ್ವಹಣೆಗೆ 12 ಗುತ್ತಿಗೆ ಕಂಪನಿಗಳು ಮುಂದೆ ಬಂದಿರುವುದರಿಂದ ಎಂಟು ಸಾವಿರ ಸೈಕಲ್ ಬಿಡುಗಡೆ ಮಾಡಲು ಪಾಲಿಕೆ ನಿರ್ಧರಿಸಿದೆ.
ಮೆಟ್ರೋ ಮಾದರಿಯಲ್ಲಿ ಸ್ವೈಪಿಂಗ್ ಕಾರ್ಡ್ ನೀಡಲಾಗುತ್ತದೆ. ಸಾರ್ವಜನಿಕರು ಗುತ್ತಿಗೆ ಕಂಪನಿಯಿಂದ ಬಾಡಿಗೆಗೆ ಸೈಕಲ್ ಪಡೆದು ಓಡಿಸಬಹುದಾಗಿದೆ. ಸ್ವೈಪ್ ಮಾಡಿದರೆ ತಾನಾಗಿಯೇ ಸೈಕಲ್ನ ಲಾಕ್ ಓಪನ್ ಆಗುತ್ತದೆ. ನಂತರ ಸೈಕಲ್ ಪಡೆದು ಎಲ್ಲಿ ಬೇಕಾದರೂ ಸುತ್ತಾಡಬಹುದು.
ತಾವು ಸೈಕಲ್ ಪಡೆದ ಸ್ಥಳದಲ್ಲೇ ವಾಪಸ್ ತಂದು ನಿಲ್ಲಿಸಬೇಕೆಂಬ ನಿಯಮ ಇರುವುದಿಲ್ಲ. ಬಹಳಷ್ಟು ಕಡೆ ಸೈಕಲ್ ನಿಲುಗಡೆ ವ್ಯವಸ್ಥೆ ಮಾಡಿರುರುವುದರಿಂದ ತಮಗೆ ಹತ್ತಿರದ ಸ್ಥಳದಲ್ಲೇ ಬಾಡಿಗೆದಾರರು ಸೈಕಲ್ ಬಿಡಬಹುದು. ಹಾಗಾಗಿ ಜನರಿಗೆ ತೊಂದರೆಯಾಗುವುದಿಲ್ಲ.
ಈ ಹಿಂದೆಯೇ ಸೈಕಲ್ ಯೋಜನೆಗೆ ಟ್ರ್ಯಾಕ್ ಕೂಡ ಮಾಡಲಾಗಿತ್ತು. ಆದರೆ ಸೈಕಲ್ ಬಿಡುಗಡೆಯಾಗಿರಲಿಲ್ಲ. ಮೈಸೂರು ನಗರದಲ್ಲಿ ಸೈಕಲ್ ಯೋಜನೆ ಯಶಸ್ವಿಯಾಗಿರುವುದನ್ನು ಮನಗಂಡು ಇಲ್ಲೂ ಕೂಡ ಇದರ ಯಶಸ್ವಿಗೆ ಬಿಬಿಎಂಪಿ ಮುಂದಾಗಿದೆ.
ತಮ್ಮ ತಮ್ಮ ಬಡಾವಣೆಯಲ್ಲೇ ಸೈಕಲ್ಗಳು ಸಿಗುವುದರಿಂದ ಜನರು ಸೈಕಲ್ ಪಡೆದು ಓಡಿಸಬಹುದು. ಆರೋಗ್ಯ ದೃಷ್ಟಿಯಿಂದಲೂ ಸೈಕಲ್ ಚಾಲನೆ ಒಳ್ಳೆಯದು. ಹಾಗಾಗಿ ಈ ಯೋಜನೆ ಯಶಸ್ವಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.