ರಸಗೊಬ್ಬರದ ಕೊರತೆಯಿಲ್ಲ – ಕೃಷಿ ಸಚಿವ ಶಿವಶಂಕರರೆಡ್ಡಿ

ಬೆಂಗಳೂರು, ಆ.8-ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯ ಬಳಿಕವೂ 5.32 ಲಕ್ಷ ಮೆಟ್ರಿಕ್‍ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಅವರು ಹೇಳಿದರು.
ಕೆಲವು ಜಿಲ್ಲೆಗಳಲ್ಲಿ ಉಂಟಾಗಿರುವ ಮಳೆ ಅಭಾವದಿಂದ 2.16 ಲಕ್ಷ ಹೆಕ್ಟೇರ್ ವಿಸ್ತೀಣದಲ್ಲಿ ಬೆಳೆನಷ್ಟ ಉಂಟಾಗಿದೆ. ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಜೋಳ, ಸಜ್ಜೆ, ಹತ್ತಿ ಬೆಳೆಗಳು ನಷ್ಟವಾಗಿವೆ. ಹೆಚ್ಚು ಮಳೆಯಾದ ಎಂಟು ಜಿಲ್ಲೆಗಳಲ್ಲೂ ಬೆಳೆನಷ್ಟವಾಗಿದೆ. ಭತ್ತ, ಉದ್ದು, ಹೆಸರು, ಕಬ್ಬು, ಶೇಂಗಾ, ಹತ್ತಿ ಬೆಳೆಗಳು ನಷ್ಟಕ್ಕೀಡಾಗಿವೆ ಎಂದರು.
ರಾಜ್ಯದ ವಾಡಿಕೆ ಮಳೆ ಪ್ರಮಾಣ 1156 ಮಿಲಿ ಮೀಟರ್ ಆಗಿದ್ದು, ಆಗಸ್ಟ್ 6ರವರೆಗೂ 522 ಮಿ.ಮೀ.ನಷ್ಟು ಮಳೆಯಾಗಿದೆ. ಜುಲೈನಲ್ಲಿ ಶೇ.10ರಷ್ಟು ಮಳೆ ಕೊರತೆಯಾಗಿತ್ತು. ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು, ಧಾರವಾಡ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದರು.
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಅವರು ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ