ಉಪ ಸಭಾಪತಿ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ

 

ನವದೆಹಲಿ, ಆ.8- ಸಂಸತ್ತಿನ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ.
ಮೇಲ್ಮನೆ ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕಡೆ ದಿನ. ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶದಿಂದ ಬಿ.ಕೆ.ಹರಿಪ್ರಸಾದ್ ಅವರನ್ನು ಜಂಟಿ ಉಮೇದುವಾರರನ್ನಾಗಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ.
ಸಂಯುಕ್ತ ಜನತಾದಳದ ಹರಿವಂಶ ನಾರಾಯಣಸಿಂಗ್ ಈಗಾಗಲೇ ಎನ್‍ಡಿಎ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
64 ವರ್ಷಗಳ ಹರಿಪ್ರಸಾದ್ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುವ ಹಿರಿಯ ಕಾಂಗ್ರೆಸ್ ಸದಸ್ಯರು. ಇದರೊಂದಿಗೆ ಹರಿಪ್ರಸಾದ್ ಅವರು ಕಣದಲ್ಲಿರುವುದರಿಂದ ನಾಳೆ ನಡೆಯಲಿರುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಇತರ ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಮ್ಮತದ ಉಮೇದುವಾರ ಹರಿಪ್ರಸಾದ್ ಅವರಿಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿವೆ.
ಇಂದು ಮಧ್ಯಾಹ್ನದ ನಂತರ ಹರಿಪ್ರಸಾದ್ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಚುನಾವಣಾ ಸಮಯ ನಿಗದಿಯಾಗಿದ್ದು, ಮೇಲ್ಮನೆ ಉಪಸಭಾಪತಿ ಸ್ಥಾನಕ್ಕೆ ಎನ್‍ಡಿಎ ವರ್ಸಸ್ ಯುಪಿಎ ನಡುವೆ ಜಿದ್ದಾಜಿದ್ದಿನ ವೇದಿಕೆ ಸಜ್ಜಾಗಿದೆ. ಫಲಿತಾಂಶ ಆಸಕ್ತಿ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ