ಶೇ.44 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ – ಕೃಷಿ ಸಚಿವ

ಬೆಂಗಳೂರು, ಆ.8-ರಾಜ್ಯದಲ್ಲಿ ಮುಂಗಾರು ಮಳೆ ಅಸಮರ್ಪಕ ವಾಗಿರುವುದರಿಂದ ಶೇ.44 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ ತಿಳಿಸಿದರು.
ಪತ್ರಿಕಾಗೊಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ 1156 ಮಿಲಿ ಮೀಟರ್‍ನಷ್ಟು ಮಳೆಯಾಗಬೇಕಿತ್ತು. ಸುಮಾರು 13 ಜಿಲ್ಲೆಗಳಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಸುಮಾರು 11 ಜಿಲ್ಲೆಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ. ಈ ಮುಂಗಾರು ಹಂಗಾಮಿನಲ್ಲಿ ಒಟ್ಟು 74.69 ಲಕ್ಷ ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡುವ ಗುರಿ ಇತ್ತು. ಆದರೆ ಈವರೆಗೂ 49.47ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಇದು ಶೇ.66ರಷ್ಟು ಗುರಿ ತಲುಪಿದ್ದು, ಇನ್ನೂ ಶೇ.44 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ಹೇಳಿದರು.
ಕೃಷಿ ಇಲಾಖೆಯಲ್ಲಿ ಬಿತ್ತನೆ ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಈ ಹಿಂದೆ ಶಾನುಭೋಗರ ಆಡಳಿತಾವಧಿಯಲ್ಲಿ ಕೃಷಿ ವಿಸ್ತರಣೆ ಸಹಾಯಕರು ಗ್ರಾಮಗಳಿಗೆ ತೆರಳಿ ವೀಕ್ಷಣೆ ಮಾಡಿ ಬೆಲೆ ಮಾಹಿತಿಗಳನ್ನು ಕರಾರುವಕ್ಕಾಗಿ ಪಹಣಿಯಲ್ಲಿ ನಮೂದಿಸುತ್ತಿದ್ದರು. ಆದರೆ ಈಗ ಕಂಪ್ಯೂಟರೀಕೃತ ಪಹಣಿಗಳಲ್ಲಿ ಕರಾರುವಕ್ಕಾದ ಮಾಹಿತಿ ಸಿಗುತ್ತಿಲ್ಲ. ಈ ಲೋಪವನ್ನು ಸರಿಪಡಿಸಲು ಡ್ರೋಣ್ ಬಳಸಿ ರಾಜ್ಯಾದ್ಯಂತ ಸಮಗ್ರ ಕೃಷಿ ಬೆಳೆ ಸಮೀಕ್ಷೆ ನಡೆಸಿ ಪಹಣಿಯಲ್ಲಿ ಖಚಿತವಾಗಿ ನಮೂದಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಈ ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ತಿಂಗಳಾಂತ್ಯದೊಳಗೆ ಸಮೀಕ್ಷೆ ಕಾರ್ಯವನ್ನು ಆರಂಭಿಸಲಾಗುವುದು. ಖಾಸಗಿ ಸಂಸ್ಥೆ ಮೂಲಕ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಸರಿಸುಮಾರು ಇದಕ್ಕೆ 12 ರಿಂದ 20 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ದಕ್ಷಿಣ ಕರ್ನಾಟಕ ಭಾಗದಲ್ಲಿ ನೀಲಗಿರಿ ಮತ್ತು ಸರ್ವೆ ಬೆಳೆಗಳಿಂದ ಅಂತರ್ಜಲ ಮಟ್ಟ ಹಾಳಾಗುತ್ತಿದೆ. ಇದನ್ನು ನಿಷೇಧಿಸಿದ್ದರೂ ರೈತರು ಅದನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಿಂದ ನೀಲಗಿರಿ, ಸರ್ವೆ ಬೆಳೆಗಳಿಗೆ ಪರ್ಯಾಯವಾಗಿ (ಎಲಿಫಂಟ್ ಬ್ಯಾಂಬೋ) ಆನೆ ಬಿದಿರು ಬೆಳೆಯಲು ನಿರ್ಧರಿಸಲಾಗಿದೆ. ಇದನ್ನು ಒಮ್ಮೆ ನಾಟಿ ಮಾಡಿದರೆ ಮೂರು ವರ್ಷ ಬೆಳೆ ಬೆಳೆಯಬಹುದಾಗಿದೆ. ಪ್ರತಿ ಎಕರೆಯಲ್ಲಿ ಒಂದು ಟನ್ ಬಿದಿರು ಬೆಳೆಯಬಹುದು. ಪ್ರತಿ ಟನ್ ಬ್ಯಾಂಬೋಗೆ ಮಾರುಕಟ್ಟೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯವಿದೆ. 3ವರ್ಷದಲ್ಲಿ ರೈತರು ಸರಿಸುಮಾರು ನಾಲ್ಕೂವರೆ ಲಕ್ಷ ಆದಾಯ ಪಡೆಯಲು ಸಾಧ್ಯವಿದೆ. ಇದರಿಂದ ಭೂಮಿಯ ಫಲವತ್ತತೆಯೂ ಹಾಳಾಗುವುದಿಲ್ಲ, ಅಂತರ್ಜಲ ರಕ್ಷಣೆಯಾಗುತ್ತದೆ ಎಂದು ಅವರು ಹೇಳಿದರು.
ಸಿರಿಧಾನ್ಯ ಮೇಳ:
ಹಿಂದಿನ ಸರ್ಕಾರದ ಮಾದರಿಯಲ್ಲೇ ನಮ್ಮ ಸರ್ಕಾರವೂ ಸಾವಯವ ಮತ್ತು ಸಿರಿಧಾನ್ಯ ಮೇಳ ಆಯೋಜಿಸಲು ನಿರ್ಧರಿಸಿದೆ. ಸಿರಿಧಾನ್ಯಗಳಿಗೆ ವ್ಯಾಪಕ ಬೇಡಿಕೆ ಇದ್ದು, ಅದಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಅಗತ್ಯವಿದೆ. ರೈತರು ಮತ್ತು ಬೆಳೆಗಾರರ ನಡುವೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಅಗತ್ಯವಿದೆ. ಹೀಗಾಗಿ ಹಾಲಿನ ಡೈರಿಗಳು ಮತ್ತು ಹಾಪ್‍ಕಾಮ್ಸ್ ಮಾರಾಟ ಮಳಿಗೆಗಳ ಜೊತೆ ಒಪ್ಪಂದ ಮಾಡಿಕೊಂಡು ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಚಿಂತನೆ ನಡೆದಿದೆ.
ಹಾಲು ಒಕ್ಕೂಟಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಕೆಲವು ಹಾಪ್‍ಕಾಮ್ಸ್‍ಗಳು ಸಿರಿಧಾನ್ಯಗಳನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಅದಕ್ಕೆ ಸ್ಪಷ್ಟ ನಿಯಮಗಳನ್ನು ರೂಪಿಸಿ ಮುಖ್ಯ ವಾಹಿನಿಗೆ ತರಲು ತಾವು ಪ್ರಯತ್ನಿಸುವುದಾಗಿ ಹೇಳಿದರು.
ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಲು 153 ಕೃಷಿ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಹಾಗೆಯೇ ಇನ್ನಷ್ಟು ಹುದ್ದೆಗೆ ಬಡ್ತಿ ನೀಡಿ ಉನ್ನತ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ರೈತ ಬೆಳಕು ಯೋಜನೆ ಜಾರಿ:
ರಾಜ್ಯದಲ್ಲಿ ಸುಮಾರು 70 ಲಕ್ಷ ರೈತ ಕುಟುಂಬಗಳ ಪೈಕಿ 50 ಲಕ್ಷ ಕುಟುಂಬಗಳು ಎರಡು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಕುಟುಂಬಗಳಾಗಿವೆ. 5 ಎಕರೆಗಿಂತ ಮೇಲ್ಪಟ್ಟು ಭೂಮಿ ಹೊಂದಿರುವ 20 ಲಕ್ಷ ಕುಟುಂಬಗಳಿವೆ. ಸಣ್ಣ ಕುಟುಂಬಗಳಿಗೆ ಸಾಲ ಸೌಲಭ್ಯ ಸೇರಿದಂತೆ ಯಾವುದೇ ಯೋಜನೆಗಳು ತಲುಪುತ್ತಿಲ್ಲ. ಹೀಗಾಗಿ ಅಂತಹ ರೈತರ ಖಾತೆಗೆ 5 ರಿಂದ 10 ಸಾವಿರ ರೂ. ಹಣ ನೀಡಲು ಹಿಂದಿನ ಸಿದ್ದರಾಮಯ್ಯ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿತ್ತು. ಅದನ್ನು ಜಾರಿಗೊಳಿಸುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ