ಕಟ್ಟಡದ ಒಸಿ ಹಾಗೂ ತೆರಿಗೆ ರಸೀತಿ ತೋರಿಸದೆ ಇದ್ದರೆ ವಿದ್ಯುತ್ ಸಂಪರ್ಕ ಇಲ್ಲ

 

ಬೆಂಗಳೂರು, ಆ.8-ಇನ್ನು ಮುಂದೆ ಕಟ್ಟಡದ ಒಸಿ ಹಾಗೂ ಪ್ರಸಕ್ತ ಸಾಲಿನ ತೆರಿಗೆ ರಸೀತಿ ತೋರಿಸದೆ ಇದ್ದರೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕೊಡುವುದಿಲ್ಲ….
ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರ ಆದೇಶದ ಮೇರೆಗೆ ಬಿಬಿಎಂಪಿ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ.
ನಗರದಲ್ಲಿ ಪ್ರತಿವರ್ಷ ನೂರಾರು ಕಟ್ಟಡಗಳು ತಲೆ ಎತ್ತುತ್ತಲೇ ಇರುತ್ತವೆ. ಅವರು ಸ್ವಾಧೀನಪತ್ರ ಪಡೆದುಕೊಂಡಿರುತ್ತಾರೆ. ಆದರೆ ಅಂತಹ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ. ಸರ್ಕಾರ ಪ್ರತಿವರ್ಷ 3 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿಗೆ ನೀಡಿದೆ. ಆದರೆ ಈ ಗುರಿಯನ್ನು ತಲುಪಲು ಪಾಲಿಕೆಗೆ ಸಾಧ್ಯವಾಗಿಲ್ಲ.
ಈ ಸಂಬಂಧ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸಿ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಹೊಸದಾಗಿ ತಲೆ ಎತ್ತುವ ಕಟ್ಟಡಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇದು ಹೀಗೇ ಮುಂದುವರೆದರೆ ಬಿಬಿಎಂಪಿಗೆ ನೂರಾರು ಕೋಟಿ ನಷ್ಟವಾಗುತ್ತದೆ. ಇನ್ನು ಮುಂದೆ ಯಾವುದೇ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿಯದಂತೆ ಕ್ರಮ ತೆಗೆದುಕೊಳ್ಳಿ ಎಂದು ಆದೇಶಿಸಿದ್ದರು.
ಆಸ್ತಿ ತೆರಿಗೆ ವಂಚಿಸುವವರಿಗೆ ಚುರುಕು ಮುಟ್ಟಿಸಲು ಬೆಸ್ಕಾಂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇನ್ನು ಮುಂದೆ ಯಾವುದೇ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕಡ್ಡಾಯವಾಗಿ ಆಯಾ ವರ್ಷದ ತೆರಿಗೆ ರಸೀತಿ ಮತ್ತು ಕಟ್ಟಡದ ಒಸಿಯನ್ನು ನೀಡಲೇಬೇಕೆಂದು ಪಾಲಿಕೆ ಸೂಚಿಸಿದೆ.
ನಗರದಲ್ಲಿ ಕಟ್ಟಡಗಳು ತಲೆ ಎತ್ತುತ್ತಲೇ ಇರುವುದರಿಂದ ಇವು ಆಸ್ತಿ ತೆರಿಗೆ ವ್ಯಾಪ್ತಿಗೆ ಬಂದು ತೆರಿಗೆ ಕಟ್ಟುವುದರಿಂದ ಬಿಬಿಎಂಪಿಗೆ ಸಾವಿರಾರು ಕೋಟಿ ಆದಾಯ ಹರಿದು ಬರುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ