ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಹಿಳೆ ಸಾವು

 

ಕುಣಿಗಲ್,ಆ.8- ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಾಗಡಿ ತಾಲ್ಲೂಕಿನ ಅತ್ತಿಮಗೆರೆ ನಿವಾಸಿ ಸೌಮ್ಯ(20)ಮೃತಪಟ್ಟ ದುರ್ದೈವಿ.
ಒಂದು ವರ್ಷದ ಹಿಂದೆಯಷ್ಟೇ ಅದೇ ತಾಲ್ಲೂಕಿನ ನಾಡಬಾಳ ಹೋಬಳಿ ಮಾನಗಲ್ಲು ಗ್ರಾಮದ ಶ್ರೀಧರ್ ಎಂಬುವರೊಂದಿಗೆ ಸೌಮ್ಯ ವಿವಾಹವಾಗಿತ್ತು.
ಈಕೆಯನ್ನು ಹೆರಿಗೆಗಾಗಿ ಮೊನ್ನೆ ಪಟ್ಟಣದ ಸಪ್ತಗಿರಿ ಖಾಸಗಿ ನರ್ಸಿಂಗ್ ಹೋಂಗೆ ಸೇರಿಸಲಾಗಿತ್ತು. ಹೆರಿಗೆ ನೋವು ಬಾರದ ಕಾರಣ ವೈದ್ಯರು ಚುಚ್ಚುಮದ್ದು ನೀಡಿ ನಂತರ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಹೆಣ್ಣು ಮಗು ಜನಿಸಿದ್ದು, ಸೌಮ್ಯಳಿಗೆ ಅತೀ ರಕ್ತಸ್ರಾವವಾಗಿದೆ. ಕೂಡಲೇ ವೈದ್ಯರು ರಕ್ತ ತರುವಂತೆ ಸೌಮ್ಯಳ ಪತಿಗೆ ತಿಳಿಸಿದ್ದಾರೆ.
ತಕ್ಷಣ ತುಮಕೂರಿಗೆ ಶ್ರೀಧರ್ ರಕ್ತ ತರಲೆಂದು ತೆರಳಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ವೈದ್ಯರು ತಮ್ಮದೇ ಆಸ್ಪತ್ರೆಯ ಆ್ಯಂಬುಲೆನ್ಸ್‍ನಲ್ಲಿ ಸೌಮ್ಯಳನ್ನು ಬೆಳ್ಳೂರು ಕ್ರಾಸ್‍ನ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿನ ವೈದ್ಯರು ಸೌಮ್ಯಳನ್ನು ಪರೀಕ್ಷಿಸಿ ಈಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಗು ಉಸಿರಾಡುತ್ತಿರುವುದನ್ನು ಕಂಡು ಅಲ್ಲಿನ ವೈದ್ಯರು ಮಗುವನ್ನು ಐಸಿಯುವಿನಲ್ಲಿ ಇಟ್ಟು ಸೌಮ್ಯಳ ಶವನ್ನು ವಾಪಸ್ ಕಳುಹಿಸಿದ್ದಾರೆ. ನಂತರ ಶವವನ್ನು ಕುಟುಂಬಸ್ಥರು ಹೆರಿಗೆಯಾದ ಖಾಸಗಿ ಆಸ್ಪತ್ರೆಗೆ ತಂದು ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ಶ್ರೀಧರ್ ಹಾಗೂ ಸಂಬಂಧಿಕರು ಆರೋಪಿಸಿದ್ದು, ವೈದ್ಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಪಿಎಸ್‍ಐ ಪುಟ್ಟೇಗೌಡ, ಸಿಪಿಐ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪೆÇೀಷಕರನ್ನು ಸಮಾಧಾನಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ