ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ವಿರುದ್ಧ ಬಿಜೆಪಿ ಲೇವಡಿ

ಬೆಂಗಳೂರು, ಆ.7-ಉಚ್ಚ ನ್ಯಾಯಾಲಯ ಚಾಟಿ ಬೀಸಿದ ಮೇಲಾದರೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರಿಗೆ ಅನಧಿಕೃತ ಬಂಟಿಂಗ್ಸ್, ಬ್ಯಾನರ್ಸ್ ನಿಷೇಧಿಸುವ ಮನಸ್ಸು ಬಂದಿದ್ದು ಸ್ವಾಗತಾರ್ಹ ಎಂದು ಬಿಜೆಪಿ ಲೇವಡಿ ಮಾಡಿದೆ.
ಬಿಜೆಪಿಯ ಶಾಂತಕುಮಾರಿ ಅವರು ಮೇಯರ್ ಆಗಿದ್ದ ಸಂದರ್ಭದಲ್ಲಿ ನಗರದ ಅಂದ ಕೆಡಿಸುವ ಬಂಟಿಂಗ್ಸ್, ಬ್ಯಾನರ್ಸ್, ಅಕ್ರಮ ಜಾಹೀರಾತು ಫಲಕಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದರು.
ಅವರು ಕೈಗೊಂಡ ತೀರ್ಮಾನ ಆ ವೇಳೆಯಲ್ಲೇ ಜಾರಿಗೆ ಬಂದಿದ್ದರೆ ಇಂದು ಎಲ್ಲೆಂದರಲ್ಲಿ ಅಕ್ರಮ ಜಾಹೀರಾತು ಫಲಕಗಳು ರಾರಾಜಿಸುತ್ತಿರಲಿಲ್ಲ. ಆದರೆ, ಅಂದಿನ ಬಿಬಿಎಂಪಿ ಆಡಳಿತಾಧಿಕಾರಿಗಳಾಗಿದ್ದ ಟಿ.ಎಂ.ವಿಜಯ್‍ಭಾಸ್ಕರ್ ಅವರು ಶಾಂತಕುಮಾರಿ ಅವರ ಕಾಲದಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯವನ್ನು ತಿರಸ್ಕರಿಸಿ ನಿಷೇಧವನ್ನು ತೆರವುಗೊಳಿಸಿದ್ದರು ಎನ್ನುವುದನ್ನು ಬಿಬಿಎಂಪಿ ಮಾಜಿ ಉಪಮಹಾಪೌರ ಎಸ್.ಹರೀಶ್ ನೆನಪು ಮಾಡಿಕೊಂಡಿದ್ದಾರೆ.
ಶಾಂತಕುಮಾರಿ ಅವರ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯವನ್ನು ಆಡಳಿತಾಧಿಕಾರಿಯಾಗಿದ್ದ ವಿಜಯ್ ಭಾಸ್ಕರ್ ಅವರು ಅಂದೇ ಜಾರಿಗೆ ತಂದಿದ್ದರೆ ಇಂದು ಉಚ್ಛ ನ್ಯಾಯಾಲಯದಿಂದ ಛೀಮಾರಿಗೊಳಗಾಗುವ ಅವಶ್ಯಕತೆ ಬರುತ್ತಿರಲಿಲ್ಲ ಎಂದರು.
ಜಾಹೀರಾತು ಮಾಫಿಯಾಗೆ ಮಣಿದು ಅಂದು ಅಕ್ರಮ ಜಾಹೀರಾತು ಫಲಕ ನಿಷೇಧ ನಿರ್ಣಯವನ್ನು ಕೈ ಬಿಡಲಾಗಿತ್ತು. ಈಗ ಉಚ್ಛ ನ್ಯಾಯಾಲಯ ಚಾಟಿ ಬೀಸಿದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ವಿಜಯ್ ಭಾಸ್ಕರ್ ಅವರು ಅಂದು ತಾವು ತಿರಸ್ಕರಿಸಿದ್ದ ನಿರ್ಣಯವನ್ನು ಅನಿವಾರ್ಯವಾಗಿ ಮತ್ತೊಮ್ಮೆ ಜಾರಿ ಗೊಳಿಸುವ ಹೊಣೆ ಹೊರಬೇಕಾಗಿ ಬಂದಿದೆ.
ಒಂದು ಉತ್ತಮ ನಿರ್ಣಯವನ್ನು ತಿರಸ್ಕರಿಸುವ ಮುನ್ನ ನೂರು ಬಾರಿ ಯೋಚಿಸಬೇಕು ಎನ್ನುವುದನ್ನು ವಿಜಯ್ ಭಾಸ್ಕರ್ ಅವರು ಈಗಲಾದರೂ ನೆನಪು ಮಾಡಿಕೊಳ್ಳಲಿ ಎಂದು ಹರೀಶ್ ಸಲಹೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತರೇ ಜಿಲ್ಲಾ ಚುನಾವಣಾಧಿಕಾರಿಗಳಾಗುತ್ತಾರೆ. ಇನ್ನು ಕಂದಾಯಾಧಿಕಾರಿಗಳು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಾರೆ.
ಚುನಾವಣೆ ಮುಗಿಯುವವರೆಗೂ ಯಾವುದೇ ಜಾಹೀರಾತು, ಅನಧಿಕೃತ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಅಧಿಕಾರಿಗಳು ಅನುಮತಿ ನೀಡುವುದೇ ಇಲ್ಲ.
ಅದೇ ಚುನಾವಣೆ ಮುಗಿದು ಮುಖ್ಯ ಚುನಾವಣಾಧಿಕಾರಿಗಳು ಮತ್ತು ಕಂದಾಯಾಧಿಕಾರಿಗಳು ಪಾಲಿಕೆ ಅಧಿಕಾರಿಗಳಾಗಿ ಮುಂದುವರಿದಾಗ ಏಕೆ ಅನಧಿಕೃತ ಫ್ಲೆಕ್ಸ್, ಬಂಟಿಂಗ್ಸ್ ತೆರವು ಕಾರ್ಯಾಚರಣೆಯನ್ನು ಮರೆತುಬಿಡುತ್ತಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಹರೀಶ್ ಆರೋಪಿಸಿದ್ದಾರೆ.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಒಂದು ಉತ್ತಮ ಯೋಜನೆಗಳನ್ನು ಸಾಕಾರಗೊಳಿಸಲು ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ