240 ಮಂದಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

Varta Mitra News

ಬೆಂಗಳೂರು, ಆ.7- ಪದ್ಮಭೂಷಣ ಪ್ರಶಸ್ತಿ ವಿಜೇತ, ವಿಶ್ರಾಂತ ಕುಲಪತಿ ಪೆÇ್ರ.ಎಂ.ಮಹದೇವಪ್ಪ ಸೇರಿದಂತೆ ಸುಮಾರು 240 ಮಂದಿ ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಡಾ.ರಾಜ್‍ಕುಮಾರ್ ಗಾಜಿನ ಮನೆಯಲ್ಲಿ ನಾಳೆ ನಡೆಯಲಿರುವ ಕೆಂಪೇಗೌಡ ದಿನಾಚರಣೆಯಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪುರಸ್ಕøತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಖ್ಯಾತ ಚಿತ್ರನಟ ರಮೇಶ್ ಅರವಿಂದ್, ಮಜಾ ಟಾಕಿಸ್ ಖ್ಯಾತಿಯ ಸೃಜನ್ ಲೋಕೇಶ್, ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ಸೇರಿದಂತೆ ಸಾಹಿತ್ಯ, ಚಿತ್ರಕಲೆ, ಕಲೆ, ನಾಟಕ, ಸಂಗೀತ, ಕ್ರೀಡೆ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 240 ಮಂದಿಯನ್ನು ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರತಿ ವರ್ಷ ಬೆಂಗಳೂರು ಕರಗದ ಮರುದಿನ ಬಿಬಿಎಂಪಿಯಲ್ಲಿ ಕೆಂಪೇಗೌಡ ದಿನಾಚರಣೆ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ವಿಧಾನಸಭೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಕೆಂಪೇಗೌಡ ಜಯಂತಿಯನ್ನು ಮುಂದೂಡಲಾಗಿತ್ತು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಮತ್ತೆ ಕೆಂಪೇಗೌಡ ದಿನಾಚರಣೆ ಆಚರಿಸಲು ತೀರ್ಮಾನಿಸಲಾಗಿದ್ದು, ನಾಳೆ ಬಿಬಿಎಂಪಿ ಆವರಣದಲ್ಲಿ ಬೆಳಕಿನ ಹಬ್ಬ ದೀಪಾವಳಿ ರೀತಿಯಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ.
ಆಯ್ಕೆ: ಕೆಂಪೇಗೌಡ ಪ್ರಶಸ್ತಿಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಮೇಯರ್ ಸಂಪತ್‍ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಮತ್ತಿತರರು ಅರ್ಜಿ ಪರಿಶೀಲಿಸಿ ಸೂಕ್ತ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಐದು ದಿಕ್ಕುಗಳಿಂದ ಜ್ಯೋತಿ: ನಾಳೆ ನಡೆಯಲಿರುವ ಕೆಂಪೇಗೌಡ ಜಯಂತಿಗೆ ನಗರದ ನಾಲ್ಕು ದಿಕ್ಕುಗಳಿಂದ ಮಾತ್ರವಲ್ಲದೆ ಮಾಗಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ನಾಡಪ್ರಭು ಕೆಂಪೇಗೌಡರ ಸಮಾಧಿಯಿಂದಲೂ ಜ್ಯೋತಿ ಯಾತ್ರೆ ಕೈಗೊಳ್ಳಲಾಗಿದೆ.
ಕೋರಮಂಗಲ, ಲಾಲ್‍ಬಾಗ್, ಕೆಂಪಾಂಬುದಿ, ಮೇಕ್ರಿ ವೃತ್ತದಲ್ಲಿರುವ ಕೆಂಪೇಗೌಡರ ಗಡಿ ಗೋಪುರದಿಂದ ಹಾಗೂ ಮಾಗಡಿಯ ಕೆಂಪೇಗೌಡರ ಸಮಾಧಿಯಿಂದ ಆರಂಭವಾಗಲಿರುವ ಕೆಂಪೇಗೌಡ ಜ್ಯೋತಿ ಯಾತ್ರೆಗೆ ನೂರಾರು ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.
ಈಗಾಗಲೇ ಬಿಬಿಎಂಪಿ ಕಚೇರಿಯನ್ನು ತಳಿರುತೋರಣಗಳಿಂದ ಸಿಂಗರಿಸಲಿದ್ದು, ವಿದ್ಯುತ್ ದೀಪಾಲಂಕಾರಗಳಲ್ಲಿ ಕಟ್ಟಡ ಮೈಸೂರು ಅರಮನೆಯಂತೆ ಕಂಗೊಳಿಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ