ಬೆಂಗಳೂರು, ಆ.7- ರಾಜ್ಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಉತ್ತರ ಒಳನಾಡಿನ 10 ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ವಿಧಾನಸೌಧದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೂ.10ರವರೆಗೂ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಶೇ.93ರಷ್ಟು ಪ್ರದೇಶದಲ್ಲಿ ಸಾಕಷ್ಟು ಮಳೆ ಸುರಿದಿದ್ದು, ಅದರಲ್ಲೂ ಘಟ್ಟದ ಪ್ರದೇಶ, ಕರಾವಳಿ ಮತ್ತು ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಸುರಿದು ಜಲಾಶಯಗಳು ಭರ್ತಿಯಾಗಿವೆ. ಈ ಭಾಗದಲ್ಲಿ ಶೇ.3ರಷ್ಟು ಮಾತ್ರ ಮಳೆ ಕೊರತೆಯಾಗಿದೆ.
ಉಳಿದಂತೆ ಉತ್ತರ ಒಳನಾಡಿನ 10 ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದೆ. ಗುಲ್ಬರ್ಗ, ಕೊಪ್ಪಳ, ಬಿಜಾಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಈಗಾಗಿ ಮಳೆ ಕೊರತೆ ಕಾಲದಲ್ಲಿ ಬೆಳೆಯುವ ಪರ್ಯಾಯ ಬೆಳೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಹವಾಮಾನ ವೀಕ್ಷಣೆಯ ಸಮಿತಿ ರಚಿಸಲಾಗಿದ್ದು, ಅಲ್ಲಿ ಬರ ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.
ಮಳೆ ಕೊರತೆಯಿಂದ ಜನರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ 150 ದಿನ ಕೆಲಸ ಕೊಡಬೇಕು. ಜಾನುವಾರುಗಳ ಮೇವು ಮತ್ತು ಕುಡಿಯುವ ನೀರು ಕಲ್ಪಿಸಬೇಕೆಂದು ಸೂಚನೆ ನೀಡಲಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ 217 ಕೋಟಿ ಹಣ ಇದೆ ಎಂದು ತಿಳಿಸಿದರು.
ಪ್ರತಿ 30 ವರ್ಷಕ್ಕೊಮ್ಮೆ ಭೂ ದಾಖಲೆಗಳ ಇಲಾಖೆಯಿಂದ ರಾಜ್ಯಾದ್ಯಂತ ಸಮಗ್ರ ಭೂ ಸರ್ವೆ ಕಾರ್ಯ ನಡೆಯಬೇಕು. ಆದರೆ, 1964ರಲ್ಲಿ ನಡೆದ ಸರ್ವೆ ಮತ್ತೆ ನಡೆಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ನಗರ ಆಸ್ತಿ ಮಾಲೀಕತ್ವ ದಾಖಲೆ ಯೋಜನೆಯಡಿ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದು, ಬೆಳಗಾವಿ, ರಾಮನಗರ, ಉತ್ತರ ಕನ್ನಡ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಸಮಗ್ರ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ನಂತರ ಉಳಿದ ಜಿಲ್ಲೆಗಳಲ್ಲೂ ಹಂತ ಹಂತವಾಗಿ ಸರ್ವೆ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದರು.