ಬಿಜೆಪಿಯಿಂದ ರಾಜ್ಯಪಾಲರ ದುರುಪಯೋಗ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಆ.7- ಬಿಜೆಪಿಯವರು ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಂಡು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ಮಾಡಿದರು. ಈಗ ನಮ್ಮ ಬಗ್ಗೆ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಯವನಿಕಾ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕೇಂದ್ರ ಉದ್ಘಾಟನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಎಲ್ಲಾ ಆಟಗಳನ್ನು ಜನ ನೋಡಿದ್ದಾರೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಸರ್ಕಾರದ ಉತ್ತಮ ಕೆಲಸಗಳನ್ನು ನೋಡಿ ಸಹಿಸಲಾಗದೆ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಿ ಗಮನ ಸೆಳೆಯುವ ತಾಕತ್ತು ಇಲ್ಲದ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕೇಂದ್ರ ಸ್ಥಾಪನೆ:
ರಾಜ್ಯದಲ್ಲಿರುವ ಎಸ್ಸಿ-ಎಸ್ಟಿ ಸಮುದಾಯದ ದೂರುಗಳನ್ನು ಆಲಿಸಲು ದಿನದ 24 ಗಂಟೆ ಕೆಲಸ ಮಾಡುವ ಕಲ್ಯಾಣ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ದೇಶದಲ್ಲೇ ವಿನೂತನ ಪ್ರಯತ್ನ. ಈ ಮೊದಲು ಪ್ರಾಯೋಗಿಕವಾಗಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಇಲಾಖೆಯ ಹಾಸ್ಟೆಲ್‍ಗಳು ಅನುದಾನ ಹಂಚಿಕೆ ಹಾಗೂ ಇತರೆ ಯೋಜನೆಗಳಲ್ಲಿನ ಸಮಸ್ಯೆಗಳು ಸೇರಿದಂತೆ ಹಲವಾರು ರೀತಿಯ ಗೊಂದಲಗಳಿಗೆ ಸಹಾಯವಾಣಿ ಮೂಲಕ ಸಾರ್ವಜನಿಕರು ಉತ್ತರ ಪಡೆಯಬಹುದು ಎಂದರು.
2500 ಹಾಸ್ಟೆಲ್‍ಗಳಲ್ಲಿನ ಸೌಲಭ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಕಲ್ಯಾಣ ಕೇಂದ್ರಕ್ಕೆ ದೂರು ನೀಡಬಹುದಾಗಿದೆ. ಈ ದೂರುಗಳು ಹಾಸ್ಟೆಲ್ ವಾರ್ಡ್‍ನಿಂದ ತಾಲ್ಲೂಕು, ಜಿಲ್ಲಾ ಕಚೇರಿ ಹಾಗೂ ಸಚಿವರ ಮಟ್ಟಕ್ಕೂ ತಲುಪಲಿದೆ ಎಂದು ಅವರು ಹೇಳಿದರು.
ಎಸ್ಸಿ-ಎಸ್ಟಿ ಸಮುದಾಯದ ಜನ ತಮ್ಮ ಯಾವುದೇ ದೂರುಗಳಿದ್ದರೂ ದೂ.ಸಂ. 080-22634300 ಮತ್ತು ಮೊಬೈಲ್ 9901100000ಗೆ ದೂರು ನೀಡಬಹುದಾಗಿದೆ ಎಂದು ಹೇಳಿದರು.
ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಕಲ್ಯಾಣ ಕೇಂದ್ರ ಕೆಲಸ ಮಾಡುತ್ತಿದ್ದು, ದಿನದ 24 ಗಂಟೆ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಲ್ಯಾಣ ಕೇಂದ್ರ ಉದ್ಘಾಟಿಸಿ ಶುಭ ಹಾರೈಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ