ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಅಧಿಕಾರ ಮತ್ತು ಹಣದ ಆಮಿಶ

ಬೆಂಗಳೂರು, ಆ.7- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಈಗಲೂ ಪ್ರಯತ್ನ ಮುಂದುವರೆಸಿದ್ದು, ಕಾಂಗ್ರೆಸ್ ಶಾಸಕರಿಗೆ ಅಧಿಕಾರ ಮತ್ತು ಹಣದ ಆಸೆ ತೋರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಗಂಭೀರವಾಗಿ ಆರೋಪ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರ ದಾಹದಿಂದ ಅನ್ಯ ಮಾರ್ಗ ಹಿಡಿದಿದೆ. ಧರ್ಮ, ನೈತಿಕತೆಯ ಪಾಠ ಹೇಳುವ ಬಜೆಪಿ ಕಾಂಗ್ರೆಸ್ ಶಾಸಕರಿಗೆ ಕೋಟಿ ಗಟ್ಟಲೆ ಹಣ, ಉಪಮುಖ್ಯಮಂತ್ರಿ, ಸಚಿವ ಸ್ಥಾನ ನೀಡುವುದಾಗಿ ಆಮಿಷ ಹೊಡ್ಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್‍ನ ಸುಮಾರು 80 ಶಾಸಕರಿಗೂ ಬಿಜೆಪಿ ಕಡೆಯಿಂದ ಕರೆ ಬಂದಿದೆ. ರಾಜ್ಯದ ಜನರ ಪರವಾಗಿ ಹೋರಾಟ ಮಾಡುವುದನ್ನು ಬಿಟ್ಟು ಅಧಿಕಾರಕ್ಕಾಗಿ ಈ ರೀತಿಯ ಹಿಂಬಾಗಿಲ ರಾಜಕಾರಣ ಮಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಈ ಮೊದಲು ಸರ್ಕಾರ ರಚಿಸುವ ಪ್ರಯತ್ನಕ್ಕೆ ಕೈ ಹಾಕಿ ಅವಲಕ್ಷಣ ಮಾಡಿಕೊಂಡಿದ್ದಾರೆ. ಮೂರು ದಿನ ಮುಖ್ಯಮಂತ್ರಿಯಾಗಿ ನಂತರ ಅಧಿಕಾರ ಕಳೆದುಕೊಂಡರು. ಇಷ್ಟಾದರೂ ಬುದ್ದಿ ಕಲಿಯದೆ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿರುವುದು ನಾಚಿಗೆಗೇಡು ಎಂದು ಕಿಡಿಕಾರಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ವಿಷಯ ಕುರಿತು ಸ್ಥಳೀಯ ನಾಯಕರಿಗೆ ಅಧಿಕಾರ ನೀಡಲಾಗಿದೆ. ಬಿಜೆಪಿ ಹೊರತು ಪಡಿಸಿ ಜಾತ್ಯಾತೀತ ಮನಸ್ಥಿತಿಯ ಪಕ್ಷಗಳ ಜತೆ ಸ್ಥಳೀಯ ಮುಖಂಡರು ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಬ್ಯಾಂಕ್‍ಗಳಿಗೆ ವಂಚನೆ ಮಾಡಿದ ಭ್ರಷ್ಟಾಚಾರಿಗಳನ್ನು ದೇಶ ಬಿಟ್ಟು ಪರಾರಿಯಾಗಲು ಸಹಕರಿಸಿದ ಭ್ರಷ್ಟ ಕೇಂದ್ರ ಸರ್ಕಾರವನ್ನು ಅಧಿಕಾರದಿಂದ ತೊಲಗಿಸುವ ಮಹಾದುದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಸಣ್ಣಪುಟ್ಟ ಅಸಮಾಧಾನಗಳನ್ನು ನಾವು ನುಂಗಿಕೊಳ್ಳಬೇಕಾಗಿದೆ ಎಂದು ದಿನೇಶ್‍ಗುಂಡೂರಾವ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಜನಧ್ವನಿ ರ್ಯಾಲಿ:
ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ನಿಷ್ಕ್ರಿಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಬೀದರ್‍ನಲ್ಲಿ ಬೃಹತ್ ಪ್ರಮಾಣದ ಜನಧನಿ ರ್ಯಾಲಿಯನ್ನು ಆಯೋಜಿಸಲಾಗಿದೆ. ಆ.13ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಭಾಗವಹಿಸಲಿzಬಿಜೆಬಿಜೆಪಿÁ್ದರೆ. ಆ ಕಾರ್ಯಕ್ರಮದ ನಂತರ ರಾಹುಲ್‍ಗಾಂಧಿ ತೆಲಂಗಾಣದಲ್ಲಿ ಎರಡು ದಿನಗಳ ಪ್ರವಾಸಕ್ಕೆ ತೆರಳುತ್ತಾರೆ. ಎಂದು ಹೇಳಿದರು.
ಕೇಂದ್ರ ಸಚಿವರಿಗೆ ಪತ್ರ:
ಕೇಂದ್ರ ಸಚಿವರಾದ ನಿರ್ಮಲಾಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಉನ್ನತ ಹುದ್ದೆಯಲ್ಲಿರುವ ಅವರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ. 14ನೇ ಹಣಕಾಸು ಆಯೋಗದಲ್ಲಿ ಹಣ ಹಂಚಿಕೆ ಮಾಡುವಾಗ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಈಗ 15ನೇ ಹಣಕಾಸು ಆಯೋಗದ ಹಣ ಹಂಚಿಕೆಯಲ್ಲೂ ಅನ್ಯಾಯವಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಕೆಲವು ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಕೇಂದ್ರದ ಸಚಿವರು ಸರಿಪಡಿಸಬೇಕು ಎಂದರು.
ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಈ ಮೊದಲು ಸ್ಥಳೀಯ ಭಾಷೆಗಳಿಗೆ ಅವಕಾಶವಿತ್ತು. ಕೇಂದ್ರ ಸರ್ಕಾರ ನಿಯಮವನ್ನು ತಿದ್ದುಪಡಿ ಮಾಡಿ ಬ್ಯಾಂಕ್‍ಗಿಂಗ್ ಸೇವೆಗೆ ಸೇರಿದ ನಂತರ ಸ್ಥಳೀಯ ಭಾಷೆ ಕಲಿತರೆ ಸಾಕು. ಪರೀಕ್ಷೆಗೆ ಅಗತ್ಯವಿಲ್ಲ ಎಂದು ನಿಯಮ ರೂಪಿಸಿದೆ. ಇದರಿಂದ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ 18ಸಾವಿರ ಹುದ್ದೆಗಳ ಪೈಕಿ ರಾಜ್ಯದ ಯುವಕರು 1040 ಜನ ಮಾತ್ರ ಆಯ್ಕೆಯಾಗಿದ್ದಾರೆ. ಇದರಿಂದ ಭಾರೀ ಅನ್ಯಾಯವಾಗಿದ್ದು, ರಾಜ್ಯದ ಸಾವಿರಾರು ಯುವಕರು ಅವಕಾಶವಂಚಿತರಾಗಿದ್ದಾರೆ. 1994ರಿಂದಲೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‍ಶೋವನ್ನು ಸ್ಥಳಾಂತರಿಸುವ ಪ್ರಯತ್ನ ನಡೆದಿದೆ. ರಫಾಯಲ್ ಯುದ್ಧ ವಿಮಾನ ತಯಾರಿಕೆಯನ್ನು ಬೆಂಗಳೂರಿನ ಎಚ್‍ಎಎಲ್ ಬದಲಿಗೆ ಬೇರೆ ಖಾಸಗಿ ಕಂಪೆನಿಗೆ ನೀಡಿ ಅನ್ಯಾಯ ಮಾಡಲಾಗಿದೆ. ಇದೆಲ್ಲವನ್ನೂ ಸರಿಪಡಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ಅವರಿಗೆ ತಾವು ಪತ್ರ ಬರೆಯುತ್ತಿರುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ