
ನವದೆಹಲಿ: ಮೋಟಾರು ವಾಹನ ಕಾಯ್ದೆ -2017(ತಿದ್ದುಪಡಿ) ಪ್ರಸ್ತಾವವನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಫೋರ್ಟ್ ಆರ್ಗನೈಸೇಷನ್ ವತಿಯಿಂದ ದೇಶಾದ್ಯಂತ ಕರೆ ನೀಡಿರುವ ಸಾರಿಗೆ ಬಂದ್ನಿಂದಾಗಿ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಲೋಕಸಭೆಯಲ್ಲಿ ಅಂಗೀಕಾರವಾಗಿ, ಸದ್ಯ ರಾಜ್ಯಸಭೆಯ ಮುಂದಿರುವ ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯುವುದರೊಂದಿಗೆ, ಇನ್ಸುರೆನ್ಸ್ ಪ್ರೀಮಿಯಂ ಹೆಚ್ಚಿಸಿರುವುದನ್ನು ಹಾಗೂ ಪಟ್ರೋಲಿಯಂ ಉತ್ಪನ್ನಗಳ ಮೇಲಿನ ಭಾರಿ ಶುಲ್ಕವನ್ನು ಹಿಂಪಡೆಯಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಕಾಯ್ದೆ ವಿರೋಧಿಸಿ ಇಂದು ದೇಶಾದ್ಯಂತ ಎರಡನೇ ಬಾರಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕರ್ನಾಟಕದಲ್ಲಿ ಓಲಾ ಹಾಗೂ ಊಬರ್ ಸೇರಿದಂತೆ ಖಾಸಗಿ ಟ್ಯಾಕ್ಸಿ ಸೇವಾ ಸಂಸ್ಥೆಗಳು ಬಂದ್ಗೆ ಬೆಂಬಲ ನೀಡಿದ್ದು, ಕೇರಳದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ಇಲ್ಲಿನ ಖಾಸಗಿ ಬಸ್, ಆಟೋರಿಕ್ಷಾ, ಟ್ಯಾಕ್ಸಿ ಸೇರಿದಂತೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳು ರಸ್ತೆಗಿಳಿದಿಲ್ಲ.
ಜತೆಗೆ ಆಟೋಮೊಬೈಲ್ ವಲಯದವರು, ಡ್ರೈವಿಂಗ್ ಸ್ಕೂಲ್ ಮಾಲೀಕರು ಹಾಗೂ ಸಿಬ್ಬಂದಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಮೋಟಾರ್ ವಾಹನ ಕಾಯ್ದೆಯ ತಿದ್ದುಪಡಿಯಿಂದಾಗಿ ಸಾರಿಗೆ ವಲಯದಲ್ಲಿ ಏಕಸ್ವಾಮ್ಯತೆ ಉಂಟಾಗಲಿದೆ. ಆಟೋರಿಕ್ಷಾ ಸೇರಿದಂತೆ ಸ್ವಯಂಉದ್ಯೋಗಕ್ಕೆ ಹೊಡೆತ ಬೀಳಲಿದೆ. ಖಾಸಗಿ ಬಸ್ಗಳ ಪರ್ಮಿಟ್ ವ್ಯವಸ್ಥೆಯನ್ನು ಒಡೆದುಹಾಕಲಿದೆ. ಇದರಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂಬ ಆರೋಪಗಳಿವೆ.