ಬೆಂಗಳೂರು, ಆ.7- ರಾಷ್ಟ್ರೀಯ ಮತ್ತು ನಾಡ ಹಬ್ಬಗಳನ್ನು ಆಚರಿಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಚುನಾವಣಾ ಆಯೋಗ, ಸ್ವಾತಂತ್ರ್ಯ ದಿನಾಚರಣೆಯನ್ನು ನಿರಾತಂಕವಾಗಿ ಆಚರಿಸಬಹುದಾಗಿದೆ ಎಂದು ಹೇಳಿದೆ.
ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಯಾವುದೇ ಅಡ್ಡಿ ಇಲ್ಲ. ರಾಷ್ಟ್ರೀಯ ಹಬ್ಬವಾಗಿರುವುದರಿಂದ ಸಡಗರ, ಸಂಭ್ರಮ, ಉತ್ಸಾಹದಿಂದ ಧ್ವಜಾರೋಹಣ ನೆರವೇರಿಸಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಬಹುದು, ಆದರೆ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಚಿವರು ಶಾಸಕರು, ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು ನೀತಿ ಸಂಹಿತಿಗೆ ಬಾಧಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಹೇಳಿಕೆ, ಘೋಷಣೆ, ಆಶ್ವಾಸನೆಯನ್ನು ನೀಡುವಂತಿಲ್ಲ ಎಂದು ನಿರ್ಬಂದ ಹೇರಿದೆ. ಈ ಸಂಬಂಧ ಸೂಕ್ತ ಸೂಚನೆ ನೀಡುವಂತೆ ಚುನಾವಣೆ ಆಯೋಗ ಜಿಲ್ಲಾಧಿಕಾರಿಯವರಿಗೆ ನಿರ್ದೇಶಿಸಿದೆ.