ಚೆನ್ನೈ:ಆ-7: ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕರುಣಾನಿಧಿಯವರು ಕಳೆದ 10 ದಿನಗಳಿಂದ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದರು. ಅವರ ಆರೋಗ್ಯ ಇಂದು ಮತ್ತಷ್ಟು ಕ್ಷೀಣಿಸಿತ್ತು. ಅಂಗಾಂಗಳ ಕಾರ್ಯನಿರ್ವಹಣೆಯೂ ಕ್ಷೀಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 6.10ರ ಸುಮಾರಿಗೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಮುತ್ತುವೇಲ್ ಕರುಣಾನಿಧಿ ಜನನಾಯಕರಾಗಿ ಸೈ ಎನಿಸಿಕೊಂಡಿದ್ದರು.
2016ರಿಂದ ಕರುಣಾನಿಧಿ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುತ್ತಿರಲಿಲ್ಲ. ಜತೆಗೆ ಅವರಿಗೆ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಶುಕ್ರವಾರ ಅವರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದ್ದರೂ, ಭಾನುವಾರ ರಾತ್ರಿ ಮತ್ತೆ ಬಿಗಡಾಯಿಸಿತ್ತು. ಹೀಗಾಗಿ ಮತ್ತೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ತಮ್ಮ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಡಿಎಂಕೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಆಸ್ಪತ್ರೆ ಒಳಗೆ ಮತ್ತು ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಕರುಣಾನಿಧಿ ಜೀವನ:
1924ರ ಜೂನ್ 3ರಂದು ಜನಿಸಿದ ಕರುಣಾನಿಧಿ ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಪುತ್ರ. ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ ಕರುಣಾನಿಧಿ ಅವರ ಮೊದಲ ಹೆಸರು ದಕ್ಷಿಣಾಮೂರ್ತಿ.
ಡಿಎಂಕೆ ಸ್ಥಾಪಕ ಅಣ್ಣಾದೊರೈ ಕಾಲವಾದ ನಂತರ ದರ ಮುಖಂಡತ್ವ ವಹಿಸಿಕೊಂಡರು. ಅವರು 1969-71, 1971-76, 1989-91, 1996-2001 ಮತ್ತು 2006-2011ರವರೆಗೆ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
60 ವರ್ಷಗಳ ದೀರ್ಘಕಾಲದ ರಾಜಕೀಯ ವೃತ್ತಿ ಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮೂಲಕ ದಾಖಲೆ ಮಾಡಿದ್ದರು.
DMK Chief,Tamil Nadu ex Chief Minister M Karunanidhi,No More