ಬೆಂಗಳೂರು, ಆ.7- ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಯಾತಕ್ಕಾಗಿ ಮುಚ್ಚಲಾಗುತ್ತಿದೆ ಹಾಗೂ ಶಾಲೆಗಳ ಅಭಿವೃದ್ಧಿ ಸಂಬಂಧ ತಕ್ಷಣ ಶ್ವೇತಪತ್ರ ಹೊರಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್ ಮಾತನಾಡಿದರು.
28 ಸಾವಿರ ಪ್ರಾಥಮಿಕ, ಪ್ರೌಢಶಾಲೆಗಳನ್ನು ಮುಚ್ಚಲು ಸರ್ಕಾರ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಒಂದು ವೇಳೆ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅದು ಸರ್ಕಾರದ ವೈಫಲ್ಯವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳೆಂದರೆ ಕನ್ನಡ ಶಾಲೆಗಳು. ಅವುಗಳ ಗುಣಮಟ್ಟ ಕಾಪಾಡಬೇಕು. ಗುಣಮಟ್ಟ ಇಲ್ಲದ ಕಾರಣ ಪೆÇೀಷಕರು ಖಾಸಗಿ ಶಾಲೆಗಳತ್ತ ಹೋಗುತ್ತಿದ್ದಾರೆ. ಸರ್ಕಾರವೇ ಪರೋಕ್ಷವಾಗಿ ಖಾಸಗಿ ಶಾಲೆಗಳನ್ನು ಬೆಂಬಲಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಹಳಷ್ಟು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕೊಠಡಿಗಳು, ಗ್ರಂಥಾಲಯ, ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಮೊದಲು ಸರ್ಕಾರಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿಪಡಿಸಬೇಕು. ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಚುನಾವಣೆಗಾಗಿ ಪ್ರವಾಸ: ಸ್ಥಳೀಯ ಸಂಸ್ಥೆಗಳು ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೆಲುವಿಗಾಗಿ ಬೂತ್ಮಟ್ಟದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲು ಆ.9 ರಿಂದ 3 ತಂಡಗಳಲ್ಲಿ ನಮ್ಮ ನಾಯಕರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಇದೇ ವೇಳೆ ರವಿಕುಮಾರ್ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡ ಆ.9ರಿಂದ ಬೀದರ್ನಿಂದ ಪ್ರವಾಸ ಪ್ರಾರಂಭಿಸಿ ಗುಲ್ಬರ್ಗ, ಗದಗ ಸೇರಿದಂತೆ 13 ಜಿಲ್ಲೆಗಳಲ್ಲಿ ಆ.16ರ ವರೆಗೆ ಪ್ರವಾಸ ಕೈಗೊಳ್ಳುವರು.
ಜಗದೀಶ್ ಶೆಟ್ಟರ್ ನೇತೃತ್ವದ ತಂಡ ಶಿವಮೊಗ್ಗ, ದಾವಣಗೆರೆ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರಗಳಲ್ಲಿ ಪ್ರವಾಸ ಮಾಡುವರು.
ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈ ಗೊಳ್ಳುವರು.
ಪ್ರವಾಸದ ವೇಳೆ ಆಯಾ ಜಿಲ್ಲೆಯಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತದೆ. ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಬೇಕಾದ ತಂತ್ರ, ಭೂತ್ಗಳನ್ನು ಸ್ಟ್ರಾಂಗ್ ಮಾಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಸಂಸತ್ನಲ್ಲಿ ಹಿಂದುಳಿದ ವರ್ಗಗಳ ಬಿಲ್ ಪಾಸಾದುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ರವಿಕುಮಾರ್ ತಿಳಿಸಿದರು.