ನರೇನ್ ಮೆಶೀನ್ ಇಂಡಿಯಾ ಪ್ರೈ. ಲಿ. ಸಂಸ್ಥೆಯಿಂದ ಉದ್ಯಮ ಸ್ನೇಹಿ ಜಾಲತಾಣ

Varta Mitra News

ಬೆಂಗಳೂರು, ಆ.7- ಚಿಕ್ಕ ನಗರಗಳ ಹಾಗೂ ಗ್ರಾಮೀಣ ಪ್ರದೇಶದ ವರ್ತಕರ ಯಂತ್ರೋಪಕರಣಗಳ ಅಗತ್ಯತೆಯನ್ನು ಪೂರೈಸಲು ಬೆಂಗಳೂರಿನ ನರೇನ್ ಮೆಶೀನ್ ಇಂಡಿಯಾ ಪ್ರೈ. ಲಿ. ಸಂಸ್ಥೆ ಬಳಕೆದಾರ ಮತ್ತು ಉದ್ಯಮ ಸ್ನೇಹಿ ಜಾಲತಾಣವನ್ನು ಆರಂಭಿಸಿದೆ.
ಮೆಶೀನ್ ಎನ್‍ಮೋಟಾರ್.ಕಾಮ್ ಜಾಲತಾಣ ಗ್ರಾಮೀಣ ಪ್ರದೇಶ, ಎರಡನೆ ಹಾಗೂ ಮೂರನೆ ಸ್ತರದ ನಗರಗಳಲ್ಲಿ ಆನ್‍ಲೈನ್ ಮೂಲಕ ಯಂತ್ರೋಪಕರಣಗಳ ಖರೀದಿಗೆ ಉತ್ತಮ ವೇದಿಕೆಯಾಗಿದೆ.
ಈ ಜಾಲತಾಣವು ಮೊದಲಿಗೆ ಮಾರಾಟಗಾರರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಕಡಿಮೆ ಅಥವಾ ಅಧಿಕ ಮೊತ್ತದ ಬಂಡವಾಳ ಹೂಡಿರುವ ಯಾವುದೇ ಉದ್ದಿಮೆದಾರರು, ತಯಾರಕರು, ಬಿಡಿಭಾಗಗಳ ಮಾರಾಟಗಾರರು ಮತ್ತು ವ್ಯಾಪಾರಿಗಳು ಯಾರು ಬೇಕಾದರೂ ತಮ್ಮ ಹೆಸರನ್ನು ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡು ಕಂಪೆನಿ ಯಂತ್ರಗಳನ್ನು ಮಾರಾಟ ಮಾಡಬಹುದು.
ನರೇನ್ ಮಶೀನ್ ಇಂಡಿಯಾ ಪ್ರೈ.ಲಿ.ನ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಅಶೋಕ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹತ್ವಾಕಾಂಕ್ಷಿ ಕಾರ್ಯಕ್ರಮ ಮೆಶೀನ್ ಎನ್ ಮೋಟಾರ್, ಆನ್‍ಲೈನ್‍ನಲ್ಲಿ ಮಶೀನ್‍ಗಳ ಮಾರಾಟ ಮತ್ತು ವ್ಯವಹಾರಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ. ಪ್ರತಿಯೊಬ್ಬ ಮಾರಾಟಗಾರನಿಗೂ ವರ್ಚುವಲ್ ಸ್ಟೋರ್‍ಗಳು ಮತ್ತು ಅಪರಿಮಿತ ವ್ಯವಹಾರದ ಅವಕಾಶ ಕಲ್ಪಿಸಿಕೊಡುವುದರ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಉದ್ದೇಶ ಎಂದರು.
15 ಸಾವಿರಕ್ಕೂ ಅಧಿಕ ಉತ್ಪನ್ನಗಳು: ಮೆಶೀನ್ ಎನ್ ಮೋಟಾರ್.ಕಾಮ್ ಎಲ್ಲ ರೀತಿಯ ಂತ್ರ, ಮೋಟಾರು, ವಿವಿಧ ಕೈಗಾರಿಕಾ ಸಲಕರಣೆಗಳು ಮತ್ತು ಬಿಡಿ ಭಾಗಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಪ್ರಸ್ತುತ ಈ ಜಾಲತಾಣವು 30 ವಿವಿಧ ವಿಭಾಗಗಳನ್ನು ಹೊಂದಿದ್ದು, 15,000ಕ್ಕೂ ಅಧಿಕ ಉತ್ಪನ್ನಗಳು ಈ ಜಾಲತಾಣದಲ್ಲಿ ಲಭ್ಯವಿವೆ.
ಮೊಬೈಲ್ ತಂತ್ರಜ್ಞಾನದ ಬಳಕೆ: ಈ ಜಾಲತಾಣವು ಮಾರಾಟಗಾರರಿಗೆ ಹೊಸ ಮೊಬೈಲ್ ತಂತ್ರಜ್ಞಾನದ ಮೂಲಕ ವ್ಯವಹಾರದ ಕುರಿತು ಸವಿವರವಾದ ಮಾಹಿತಿ ಒದಗಿಸುತ್ತದೆ. ಈ ತಂತ್ರಜ್ಞಾನದ ಮೂಲಕ ಮಾರಾಟಗಾರರು ಯಾವುದೇ ಉತ್ಪನ್ನಗಳನ್ನು ಅಪ್‍ಲೋಡ್ ಮಾಡಬಹುದಾಗಿದ್ದು, ಆ ಉತ್ಪನ್ನದ ಸಂಪೂರ್ಣ ವಿವರ ತಿಳಿಯಬಹುದು.
ಇ-ವಾಣಿಜ್ಯ ಮತ್ತು ಕೈಗಾರಿಕಾ ಖರೀದಿ: ಕೈಗಾರಿಕಾ ಉತ್ಪನ್ನಗಳ ಖರೀದಿಯ ಹೊರತಾಗಿ ಇನ್ನೆಲ್ಲ ಕ್ಷೇತ್ರಗಳಲ್ಲೂ ಇ-ವಾಣಿಜ್ಯವು ಜನಪ್ರಿಯವಾಗುತ್ತಿದೆ. ಈ ವಹಿವಾಟಿನಲ್ಲಿ ಸಂಸ್ಥೆಯು ಸುಮಾರು 10 ಬಿಲಿಯನ್ ಡಾಲರ್ ವಹಿವಾಟನ್ನು ಅಂದಾಜಿಸಿದ್ದು, ಈ ಕ್ಷೇತ್ರದಲ್ಲಿ ಇ-ವಾಣಿಜ್ಯದ ಪ್ರಗತಿಗಾಗಿ ವಿಫುಲ ಅವಕಾಶ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ನರೇನ್ ಮೆಶೀನ್ ಇಂಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಎಚ್‍ಎನ್‍ಎ ಪುರುಷೋತ್ತಮ್ ಮಾತನಾಡಿ, ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಗ್ರಾಹಕರು ಅತ್ಯಲ್ಪ ಉಪಯೋಗಗಳನ್ನು ಪಡೆದುಕೊಳ್ಳುತ್ತಾರೆ. ಮೆಶೀನ್ ಎನ್ ಮೋಟಾರ್ಸ್.ಕಾಮ್ ಮೂಲಕ ನಾವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅವಕಾಶದ ಬಾಗಿಲನ್ನು ತೆರೆಯುತ್ತಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ