ಬೆಂಗಳೂರು, ಆ.7- ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ 7 ಕೆಜಿ ಅಕ್ಕಿ ವಿತರಣೆ ಮಾಡಲು ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೂ ಬಿಪಿಎಲ್ ಕುಟುಂಬಗಳಿಗೆ ವಿತರಣೆ ಮಾಡುತ್ತಿರುವ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸದೆ,ಪ್ರತಿ ಕುಟುಂಬಕ್ಕೂ 7 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸುಮಾರು 70 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ 2 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ 700 ರಿಂದ 600 ಕೋಟಿ ಹೊರೆಯಾಗಲಿದೆ. ಆದರೂ, ಇದೊಂದು ಜನಪ್ರಿಯ ಕಾರ್ಯಕ್ರಮವಾಗಿರುವುದರಿಂದ ಮುಂದುವರೆಸಲೇಬೇಕೆಂಬುದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಒತ್ತಾಯವಾಗಿತ್ತು.
ಆರ್ಥಿಕ ಸಂಪನ್ಮೂಲಕ್ಕೆ ಒತ್ತು ನೀಡಬೇಕಾಗಿರುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ಈ ನಿರ್ಧಾರಕ್ಕೆ ಬಂದಿತ್ತು. ಆದರೆ, ಇದಕ್ಕೆ ದೋಸ್ತಿ ಪಕ್ಷವಾದ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಯಾವುದೇ ಕಾರಣಕ್ಕೂ ಅಕ್ಕಿ ಪ್ರಮಾಣವನ್ನು ಕಡಿತ ಮಾಡಬಾರದು. ಎಷ್ಟೇ ಖರ್ಚಾದರೂ ಸರಿಯೇ. ಹಿಂದಿನ ವ್ಯವಸ್ಥೆ ಇರಬೇಕು ಎಂಬುದು ಕಾಂಗ್ರೆಸ್ನ ವಾದವಾಗಿತ್ತು.
ಸರ್ಕಾರದಲ್ಲಿ ಬಿರುಕು ಮಾಡಬಾರದೆಂಬ ಕಾರಣಕ್ಕಾಗಿ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವ ಕುಮಾರಸ್ವಾಮಿ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಜೋಳ-ರಾಗಿ ವಿತರಣೆ:ಇನ್ನು ಮುಂದೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅರ್ಹ ಫಲಾನುಭವಿಗಳಿಗೆ ಅನ್ನ ಭಾಗ್ಯ ಯೋಜನೆಯಡಿ 2 ಕೆ.ಜಿ. ಜೋಳ ಹಾಗೂ ಇಷ್ಟೇ ಪ್ರಮಾಣದಲ್ಲಿ ರಾಗಿ ವಿತರಣೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ದಕ್ಷಿಣ ಕರ್ನಾಟಕದಲ್ಲಿ ರಾಗಿಗೆ ಹೆಚ್ಚಿನ ಬೇಡಿಕೆ ಇದ್ದರೆ, ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಬೇಡಿಕೆಯಿದೆ. ಈಗಾಗಲೇ ಎರಡು ಭಾಗದ ಶಾಸಕರು ಮತ್ತು ಸಚಿವರು ಫಲಾನುಭವಿಗಳಿಗೆ ಅಕ್ಕಿಯ ಜೊತೆ ರಾಗಿ ಮತ್ತು ಜೋಳ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಇದನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಸರ್ಕಾರ ಜನರ ಬೇಡಿಕೆಯಂತೆ ದಕ್ಷಿಣ ಭಾಗಕ್ಕೆ ರಾಗಿ ಹಾಗೂ ಉತ್ತರ ಕಡೆಯವರಿಗೆ ಜೋಳ ವಿತರಣೆ ಮಾಡಲು ತೀರ್ಮಾನಿಸಿದೆ. 7 ಕೆ.ಜಿ ಅಕ್ಕಿ ಪಡೆದರೆ, ರಾಗಿ ಹಾಗೂ ಜೋಳ ಸಿಗುವುದಿಲ್ಲ. ಬದಲಿಗೆ 5 ಕೆ.ಜಿ ಅಕ್ಕಿ ಪಡೆದರೆ, ಮಾತ್ರ ರಾಗಿ ಇಲ್ಲವೇ ಜೋಳ ಲಭ್ಯವಾಗಲಿದೆ.