ಬೆಂಗಳೂರು, ಆ.6-ಸಾಲ ಮರುಪಾವತಿಸುವಂತೆ ಬ್ಯಾಂಕ್‍ನವರು ನೋಟೀಸ್ ನೀಡುತ್ತಿರುವುದಕ್ಕೆ ರೈತರು ಗಾಬರಿಯಾಗುವುದು ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸಾಲ ಮನ್ನಾ ಮಾಡಿದೆ, ಸಾಲ ತೀರುವಳಿ ಪತ್ರ ನೀಡುವ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಬಗ್ಗೆ ಯಾವುದೇ ಆತಂಕ ಬೇಡ. ಸರ್ಕಾರ ನಿಮ್ಮೊಂದಿಗಿದೆ ಎಂದು ಹೇಳಿದರು.
ಸಾಲ ಮರುಪಾವತಿಸುವಂತೆ ಬ್ಯಾಂಕ್‍ನವರು ರೈತರಿಗೆ ನೋಟೀಸ್ ನೀಡುತ್ತಿದ್ದಾರೆ ಎಂಬ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಯಾರೂ ಆತಂಕಪಡಬೇಡಿ ಎಂದು ಅವರು ತಿಳಿಸಿದರು.
ಅವಧಿ ಮುಗಿದರೂ ಸಾಲ ತೀರಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಬಹುತೇಕ ಬ್ಯಾಂಕ್‍ನವರು ರೈತರಿಗೆ ನೋಟೀಸ್ ನೀಡುತ್ತಿದ್ದಾರೆ. ರೈತರ ಖಾತೆಗಳಿಗೆ ಜಮೆಯಾಗುವ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಇನ್ನಿತರ ಮೂಲಗಳ ಹಣವನ್ನು ಸಾಲಕ್ಕೆ ಬ್ಯಾಂಕ್‍ನವರು ಜಮೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೃಷಿಕರ ವಲಯದಲ್ಲಿ ಸಾಕಷ್ಟು ಅಸಮಾಧಾನ ಸೃಷ್ಟಿಯಾಗಿದೆ.
ಅತ್ತ ಸರ್ಕಾರ ಸಾಲ ಮನ್ನಾ ಮಾಡಿದೆ ಎಂದು ಹೇಳಿದೆ, ಇತ್ತ ಬ್ಯಾಂಕ್‍ನವರು ನೋಟೀಸ್ ಕೊಡುತ್ತಿದ್ದಾರೆ. ಅಲ್ಲದೆ ನಮ್ಮ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣವನ್ನು ಸಾಲಕ್ಕೆ ಮರುಪಾವತಿ ಮಾಡಿಕೊಳ್ಳುತ್ತಿದ್ದಾರೆ. ಮರುಪಾವತಿ ಮಾಡಿಕೊಂಡ ಹಣವನ್ನೇನೂ ಅವರು ವಾಪಸ್ ಕೊಡುವುದಿಲ್ಲ. ಇವರು ಯಾವಾಗ ನಮ್ಮ ಸಾಲವನ್ನು ಮನ್ನಾ ಮಾಡುವುದು ಎಂದು ಹಲವು ರೈತರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಬ್ಯಾಂಕರ್‍ಗಳ ಜೊತೆ ಸಭೆ ನಡೆಸಿ ಸುಮಾರು ಆರೂವರೆ ಸಾವಿರ ಕೋಟಿ ರೂ.ಗಳನ್ನು ಹಂತ ಹಂತವಾಗಿ ನೀಡುವುದಾಗಿ ಹೇಳಿದೆ. ಕೆಲವು ಬ್ಯಾಂಕ್‍ಗಳವರು ಇದಕ್ಕೆ ಒಪ್ಪಿದ್ದಾರೆ, ಮತ್ತೆ ಕೆಲವರು ಒಪ್ಪಿದಂತಿಲ್ಲ. ಈ ಗೊಂದಲದ ನಡುವೆಯೇ ಕೆಲವೆಡೆ ನೋಟೀಸ್‍ಗಳು ಬರುತ್ತಿದೆ. ಇದರಿಂದ ರೈತರು ಸಾಲ ಮನ್ನಾ ಆಗುತ್ತದೆಯೋ ಇಲ್ಲವೋ ಎಂದು ಹೆದರಿದ್ದಾರೆ. ಉತ್ತಮ ಮಳೆ ಬಂದಿದೆ, ಬೀಜ, ಗೊಬ್ಬರ, ಇನ್ನಿತರ ಚಟುವಟಿಕೆಗಳಿಗೆ ಮತ್ತೆ ಹಣ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ನೋಟೀಸ್ ಬಂದರೆ ಹೇಗೆ ಎಂಬ ಭೀತಿಗೆ ರೈತರು ಒಳಗಾಗಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಆತಂಕಕ್ಕೊಳಗಾಗುವುದು ಬೇಡ ಎಂದು ಭರವಸೆ ನೀಡಿದ್ದಾರೆ.