ಬೆಂಗಳೂರು, ಆ.6-ಜನತಾ ಪರಿವಾರದಿಂದ ದೂರ ಸರಿದಿರುವ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ನಗರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಪರಿವಾರದಿಂದ ದೂರ ಹೋಗಿರುವ ನಾಯಕರು ಮತ್ತೆ ಜೆಡಿಎಸ್ ಪಕ್ಷಕ್ಕೆ ಬರುವಂತೆ ಮನವಿ ಮಾಡಲಾಗುವುದು. ಎಲ್ಲರೂ ಒಗ್ಗಟ್ಟಾಗಿ ಮತ್ತೆ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ಮೂವರು ಸಿಎಂ ಎಂಬ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನುಬೇಕಾದರೂ ಮಾತನಾಡಬಹುದು. ಆದರೆ, ಒಂದು ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ವಿವೇಚನೆಯಿಂದ ಮಾತನಾಡಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಜರಿದ್ದರು.